Kalaburagi | ಖಾಜಾ ಗೋಲ್ಡ್ ಕಪ್-2026 : ಕ್ರಿಕೆಟ್, ಹಾಕಿ ಪಂದ್ಯಾವಳಿಗಳ ಟ್ರೋಫಿ ಅನಾವರಣ
ಕ್ರೀಡೆಯಲ್ಲಿ ಗೆಲುವು-ಸೋಲನ್ನು ಸಮಾನವಾಗಿ ಸ್ವೀಕರಿಸಿ: ಡಾ.ಸೈಯದ್ ಮುಹಮ್ಮದ್ ಅಲಿ ಅಲ್ ಹುಸೈನಿ
ಕಲಬುರಗಿ: ಖಾಜಾ ಎಜುಕೇಶನ್ ಸೊಸೈಟಿಯ ಕೆಬಿಎನ್ ಹೌಸ್ ಆಫ್ ಸ್ಪೋರ್ಟ್ಸ್ ವತಿಯಿಂದ ಆಯೋಜಿಸಿರುವ ‘ಖಾಜಾ ಬಂದಾನವಾಜ್ ಗೋಲ್ಡ್ ಕಪ್-2026’ ಕ್ರೀಡಾಕೂಟದ ಕ್ರಿಕೆಟ್ ಮತ್ತು ಹಾಕಿ ಪಂದ್ಯಾವಳಿಗಳ ಟ್ರೋಫಿಗಳನ್ನು ಡಾ. ಹಫೀಜ್ ಸೈಯದ್ ಮುಹಮ್ಮದ್ ಅಲಿ ಅಲ್-ಹುಸೈನಿ ಅವರು ಅನಾವರಣಗೊಳಿಸಿದರು.
ದರ್ಗಾ ಹಜರತ್ ಖಾಜಾ ಬಂದಾನವಾಜ್ (ರಹ್) ಅವರ ಸಜ್ಜಾದಾ ನಶೀನ್, ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷ, ಕೆಬಿಎನ್ ವಿಶ್ವವಿದ್ಯಾಲಯದ ಕುಲಪತಿ ಹಾಗೂ ಖಾಜಾ ಎಜುಕೇಶನ್ ಸೊಸೈಟಿಯ ಅಧ್ಯಕ್ಷರಾಗಿರುವ ಅವರು ಟ್ರೋಫಿಗಳನ್ನು ಔಪಚಾರಿಕವಾಗಿ ಅನಾವರಣಗೊಳಿಸಿ ಆಟಗಾರರನ್ನು ಉದ್ದೇಶಿಸಿ ಮಾತನಾಡಿದರು.
ಕ್ರೀಡೆಯಲ್ಲಿ ಗೆಲುವು ಮತ್ತು ಸೋಲು ನಾಣ್ಯದ ಎರಡು ಮುಖಗಳಿದ್ದಂತೆ. ಆಟಗಾರರು ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು. ಕ್ರೀಡಾ ಮನೋಭಾವದಿಂದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬೇಕು. ಎಲ್ಲ ಆಟಗಾರರಿಗೂ ಶುಭವಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಪ್ರಮಥವಾಣಿ ಪತ್ರಿಕೆಯ ಸಂಪಾದಕ ಹಾಗೂ ಕಲಬುರಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಡಾ. ಶಿವರಂಜನ್ ಸತ್ಯಂಪೇಟೆ ಮಾತನಾಡಿ, ಖಾಜಾ ಶಿಕ್ಷಣ ಸಂಸ್ಥೆಯು ಈ ಭಾಗದಲ್ಲಿ ಶಿಕ್ಷಣ ಹಾಗೂ ಕ್ರೀಡಾ ಕ್ಷೇತ್ರಕ್ಕೆ ನೀಡುತ್ತಿರುವ ಅವಕಾಶಗಳು ಶ್ಲಾಘನೀಯ. ದಿವಂಗತ ಡಾ. ಸೈಯದ್ ಶಾಹ್ ಖುಸ್ರೋ ಸಾಹೇಬರು ಆರಂಭಿಸಿದ ಮಹತ್ಕಾರ್ಯವನ್ನು ಅವರ ಮಕ್ಕಳು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುತ್ತಿರುವುದು ಸಂತೋಷದ ಸಂಗತಿ ಎಂದರು.
ನವೆಂಬರ್ 3ರಿಂದ ಡಿಸೆಂಬರ್ 4ರವರೆಗೆ ನಡೆಯಲಿರುವ ಕೆಬಿಎನ್ ಗೋಲ್ಡ್ ಕಪ್-2026 ಕ್ರೀಡಾಕೂಟದಲ್ಲಿ ಫುಟ್‌ಬಾಲ್, ಕ್ರಿಕೆಟ್ ಮತ್ತು ಹಾಕಿ ಪಂದ್ಯಾವಳಿಗಳನ್ನು ಆಯೋಜಿಸಲಾಗಿದೆ. ಈಗಾಗಲೇ ಫುಟ್‌ಬಾಲ್ ಪಂದ್ಯಾವಳಿ ಮುಕ್ತಾಯಗೊಂಡಿದ್ದು, ಕ್ರಿಕೆಟ್ ಪಂದ್ಯಾವಳಿ ಪ್ರಸ್ತುತ ನಡೆಯುತ್ತಿದೆ.
ಕ್ರಿಕೆಟ್ ಪಂದ್ಯಾವಳಿಯ 10ನೇ ದಿನದ ಅಂಗವಾಗಿ ನಡೆದ ಟ್ರೋಫಿ ಅನಾವರಣ ಸಮಾರಂಭದಲ್ಲಿ ಖಾಜಾ ಎಜುಕೇಶನ್ ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಪ್ರೊ. ಎ.ಎಂ. ಪಠಾಣ್, ಕೆಬಿಎನ್ ವಿಶ್ವವಿದ್ಯಾಲಯದ ಸಹಕುಲಪತಿ ಪ್ರೊ. ಸೈಯದ್ ಅಶ್ಫಾಕ್ ಅಹ್ಮದ್, ಕುಲಸಚಿವ ಮೀರ್ ವಿಲಾಯತ್ ಅಲಿ, ಸೊಸೈಟಿಯ ಕಾರ್ಯದರ್ಶಿ ಬೆನ್ನಿ ಕುರಿಯಾಕೋಸ್, ಎಂ. ಜೀಲಾನಿ ಹಾಗೂ ಸೊಹೈಲ್ ಮುನ್ಶಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ನಂತರ 10ನೇ ದಿನದ ಪಂದ್ಯದಲ್ಲಿ ಮುಖಾಮುಖಿಯಾದ ಅಲ್-ಬರ್ಕಾತ್ ಶಾಲೆ ಮತ್ತು ಜಸ್ಟ್ ಕ್ರಿಕೆಟ್ ಅಕಾಡೆಮಿ ತಂಡಗಳ ಆಟಗಾರರನ್ನು ಗಣ್ಯರಿಗೆ ಪರಿಚಯಿಸಲಾಯಿತು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡ ಬಳಿಕ ಡಾ. ಶಿವರಂಜನ್ ಸತ್ಯಂಪೇಟೆ ಅವರು ಟಾಸ್ ಮಾಡುವ ಮೂಲಕ ಪಂದ್ಯಕ್ಕೆ ಚಾಲನೆ ನೀಡಿದರು.