Kalaburagi | ತಾಯಿ–ಹಸುಗೂಸು ಜೋಡಿ ಕೊಲೆ ಪ್ರಕರಣ: ಪ್ರಮುಖ ಆರೋಪಿಗೆ ಜೀವಾವಧಿ ಶಿಕ್ಷೆ
ಸಾಂದರ್ಭಿಕ ಚಿತ್ರ (AI)
ಕಲಬುರಗಿ : 2018ರಲ್ಲಿ ಚಿತ್ತಾಪುರ ಪಟ್ಟಣದಲ್ಲಿ ನಡೆದ ತಾಯಿ ಹಾಗೂ ಐದು ತಿಂಗಳ ಹಸುಗೂಸಿನ ಬರ್ಬರ ಹತ್ಯೆ ಪ್ರಕರಣದಲ್ಲಿ ಕಲಬುರಗಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಹತ್ವದ ತೀರ್ಪು ನೀಡಿದ್ದು, ಪ್ರಮುಖ ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ, ಪ್ರಕರಣದಲ್ಲಿ ಭಾಗಿಯಾಗಿದ್ದ ಬಾಲಪರಾಧಿಗೆ 10 ವರ್ಷಗಳ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ. ದಂಡ ವಿಧಿಸಿದೆ.
ರಾಜಸ್ಥಾನ ಮೂಲದ ವಿಕ್ರಂ ಚೌದರಿ (20) ಹಾಗೂ ಘಟನೆ ನಡೆದ ವೇಳೆ ಬಾಲಪರಾಧಿಯಾಗಿದ್ದ ದಿನೇಶ್ ಚೌದರಿ ಶಿಕ್ಷೆಗೆ ಗುರಿಯಾದವರು.
ಪ್ರಕರಣದ ವಿವರಗಳ ಪ್ರಕಾರ, 2018ರ ಮೇ 25ರಂದು ಚಿತ್ತಾಪುರದ ಇಂದಿರಾನಗರದಲ್ಲಿರುವ ಮನೆಯೊಂದರಲ್ಲಿ ಕಳ್ಳತನದ ಉದ್ದೇಶದಿಂದ ನುಗ್ಗಿದ್ದ ಆರೋಪಿಗಳು, ತಮ್ಮ ಕೃತ್ಯ ಬಹಿರಂಗವಾಗುವ ಭಯದಿಂದ ಮನೆ ಮಾಲಕಿ ನಿಷಾದೇವಿಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದರು. ಬಳಿಕ ಅಳುತ್ತಿದ್ದ ಐದು ತಿಂಗಳ ಮಗು ರಿಷಿಯನ್ನೂ ಕೊಲೆಗೈದು, ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಮೃತದೇಹಗಳನ್ನು ಸ್ಥಳಾಂತರಿಸಿ ಮನೆಗೆ ಬೀಗ ಹಾಕಿ ಹಣದೊಂದಿಗೆ ಪರಾರಿಯಾಗಿದ್ದರು.
ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆಯನ್ನು ಅಂದಿನ ಡಿವೈಎಸ್‌ಪಿಗಳಾದ ಕೆ. ಬಸವರಾಜ ಹಾಗೂ ವೈ.ಎಸ್. ಏಗನಗೌಡ ನಡೆಸಿ, ವೈಜ್ಞಾನಿಕ ಹಾಗೂ ಮೌಖಿಕ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಆರೋಪಿಗಳ ವಿರುದ್ಧ ಕೊಲೆ, ಸಾಕ್ಷ್ಯ ನಾಶ, ಅಕ್ರಮ ಪ್ರವೇಶ, ಕಳ್ಳತನ ಹಾಗೂ ದರೋಡೆ ಸೇರಿದಂತೆ ವಿವಿಧ ಕಲಂಗಳಡಿ ಆರೋಪಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಜಿ.ಎಲ್. ಲಕ್ಷ್ಮೀನಾರಾಯಣ ಅವರು ಆರೋಪಗಳು ಸಾಬೀತಾಗಿವೆ ಎಂದು ತೀರ್ಪು ನೀಡಿ, ಪ್ರಮುಖ ಆರೋಪಿ ವಿಕ್ರಂ ಚೌದರಿಗೆ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿದರು. ಜೊತೆಗೆ ಇತರೆ ಅಪರಾಧಗಳಿಗೂ ಪ್ರತ್ಯೇಕ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗಿದೆ.
ಘಟನೆ ನಡೆದ ವೇಳೆ ಬಾಲಪರಾಧಿಯಾಗಿದ್ದ ದಿನೇಶ್ ಚೌದರಿಗೆ ಕೊಲೆ ಪ್ರಕರಣದಲ್ಲಿ 10 ವರ್ಷಗಳ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ಸೇರಿದಂತೆ ಇತರೆ ಅಪರಾಧಗಳಿಗೂ ಪ್ರತ್ಯೇಕ ಶಿಕ್ಷೆ ವಿಧಿಸಲಾಗಿದೆ.
ಜೊತೆಗೆ, ಮೃತೆಯ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ನ್ಯಾಯಾಲಯ ನಿರ್ದೇಶನ ನೀಡಿದೆ. ಪ್ರಕರಣದಲ್ಲಿ ಸರ್ಕಾರದ ಪರವಾಗಿ ಪ್ರಭಾರಿ ಸರ್ಕಾರಿ ಅಭಿಯೋಜಕ ಎಸ್.ಆರ್. ನರಸಿಂಹಲು ವಾದ ಮಂಡಿಸಿದ್ದರು.