×
Ad

ಜಮೀನು ಪರಿಹಾರದಲ್ಲಿ ತಾರತಮ್ಯ ಏಕೆ? ಆಳಂದ ರೈತರಿಗೆ ನ್ಯಾಯ ನೀಡಿ: ಸಿದ್ದು ಹಿರೋಳಿ

Update: 2026-07-01 17:13 IST

ಆಳಂದ : ರೈತರ ಜಮೀನು ಖರೀದಿ ಹಾಗೂ ಪರಿಹಾರ ವಿತರಣೆಯಲ್ಲಿ ರಾಜ್ಯ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆಯೇ ಎಂದು ಕಲಬುರಗಿ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಸಿದ್ದು ಹಿರೋಳಿ ಪ್ರಶ್ನಿಸಿದ್ದಾರೆ.

ಬಿಡದಿ ಟೌನ್‌ಶಿಪ್‌ಗಾಗಿ ರೈತರಿಗೆ ಕೋಟ್ಯಂತರ ರೂಪಾಯಿ ಪರಿಹಾರ ನೀಡುತ್ತಿರುವ ಸರ್ಕಾರ, ಆಳಂದ ತಾಲೂಕಿನ ರೈತರಿಗೆ ಮಾತ್ರ ಅತ್ಯಲ್ಪ ಪರಿಹಾರ ನೀಡಿ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿ, ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಕಳೆದ ಎರಡು-ಮೂರು ವರ್ಷಗಳಿಂದ ಆಳಂದ ತಾಲೂಕಿನಲ್ಲಿ ವಿಂಡ್ ಪವರ್ ಕಂಪನಿಗಳು ರೈತರ ಜಮೀನಿನಲ್ಲಿ ಪವನ ವಿದ್ಯುತ್ ಘಟಕಗಳನ್ನು ಸ್ಥಾಪಿಸುತ್ತಿದ್ದು, ಒಂದು ಘಟಕಕ್ಕೆ 10 ಎಕರೆ ಜಮೀನು ಖರೀದಿಸಬೇಕೆಂಬ ನಿಯಮವಿದ್ದರೂ ಅದನ್ನು ಉಲ್ಲಂಘಿಸಿ ದಲ್ಲಾಳಿಗಳ ಮೂಲಕ ಜಮೀನು ಖರೀದಿಸಲಾಗುತ್ತಿದೆ ಎಂದು ದೂರಿದ್ದಾರೆ.

ಸರ್ಕಾರದ ನಿಯಮಗಳನ್ನು ಪಾಲಿಸದೇ ರೈತರ ಹಿತಾಸಕ್ತಿಗೆ ಧಕ್ಕೆ ತರುವ ಕೆಲಸ ನಡೆಯುತ್ತಿದ್ದು, ರೈತರ ಸಮಸ್ಯೆಗಳಿಗೆ ಸ್ಪಂದಿಸುವವರೇ ಇಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಲಮಟ್ಟಿ ಹಿನ್ನೀರಿನಲ್ಲಿ ಮುಳುಗಡೆಯಾಗುವ ನೀರಾವರಿ ಜಮೀನಿಗೆ ಪ್ರತಿ ಎಕರೆಗೆ 40 ಲಕ್ಷ ರೂ. ಹಾಗೂ ಒಣಭೂಮಿಗೆ 30 ಲಕ್ಷ ರೂ. ಪರಿಹಾರ ಘೋಷಿಸಿದ್ದನ್ನು ಉಲ್ಲೇಖಿಸಿದ ಹಿರೋಳಿ, ಬಿಡದಿ ಟೌನ್‌ಶಿಪ್‌ಗಾಗಿ ಜಮೀನು ಕಳೆದುಕೊಳ್ಳುತ್ತಿರುವ ರೈತರಿಗೆ ಪ್ರತಿ ಎಕರೆಗೆ 2.07 ಕೋಟಿ ರೂ. ಪರಿಹಾರ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಆದರೆ, ಮಹಾರಾಷ್ಟ್ರ ಗಡಿಭಾಗದ ಆಳಂದ ತಾಲೂಕಿನ ರೈತರಿಗೆ ಪ್ರತಿ ಎಕರೆಗೆ ಕೇವಲ 2ರಿಂದ 4 ಲಕ್ಷ ರೂ. ಮಾತ್ರ ನೀಡಲಾಗುತ್ತಿದೆ. ಈ ತಾರತಮ್ಯದಿಂದ ಗಡಿಭಾಗದ ರೈತರಿಗೆ ತೀವ್ರ ಅನ್ಯಾಯವಾಗುತ್ತಿದ್ದು, ಆಳಂದ ತಾಲೂಕಿನ ರೈತರಿಗೂ ಪ್ರತಿ ಎಕರೆಗೆ 2 ಕೋಟಿ ರೂ. ಪರಿಹಾರ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಅಜೀತ್ ಕುಲಕರ್ಣಿ, ಈರಣ್ಣ ಹತ್ತರಕಿ, ಮಹೇಶ್ ಕೋರಳ್ಳಿ, ಮನೋಜ್ ಸಿಂಗೆ, ಮಹೇಶ್ ಪವಾರ, ಶಿರೀಷ್ ವರ್ಧಮಾನೆ, ಮೌಲಾಲಿ ಆಳಂದ ಹಾಗೂ ಬಸವರಾಜ ವಾಡೇದ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News