Kalaburagi | ಚಾಕುವಿನಿಂದ ಇರಿದು ಪಂಪ್ ಆಪರೇಟರ್ ಹತ್ಯೆ
ಸಂತೋಷ ಹಣಮಂತ ನಿಂಬಾಳ
ಕಲಬುರಗಿ: ಚಾಕುವಿನಿಂದ ಹಲ್ಲೆ ನಡೆಸಿ ಪಂಪ್ ಆಪರೇಟರ್ ಒಬ್ಬರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಆಳಂದ ತಾಲೂಕಿನ ಮಾಡಿಯಾಳ ಗ್ರಾಮದಲ್ಲಿ ರವಿವಾರ ರಾತ್ರಿ ನಡೆದಿದೆ.
ಮೃತರನ್ನು ಮಾಡಿಯಾಳ ಗ್ರಾಮ ಪಂಚಾಯಿತಿಯಲ್ಲಿ ಪಂಪ್ ಆಪರೇಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಸಂತೋಷ ಹಣಮಂತ ನಿಂಬಾಳ (37) ಎಂದು ಗುರುತಿಸಲಾಗಿದೆ.
ಮೃತ ಸಂತೋಷ ಅವರ ಸಹೋದರ ಶ್ರೀಧರ ಹಾಗೂ ಅದೇ ಗ್ರಾಮದ ಮಂಜುನಾಥ ಮತ್ತು ಕಲ್ಲಪ್ಪ ಅವರ ನಡುವೆ ಇತ್ತೀಚೆಗೆ ಜಗಳ ನಡೆದಿತ್ತು. ಅದನ್ನು ಸಂತೋಷ ಬಗೆಹರಿಸಿದ್ದರು ಎನ್ನಲಾಗಿದೆ. ಇದೇ ಹಳೆಯ ವೈಷಮ್ಯವನ್ನು ಮನಸ್ಸಿನಲ್ಲಿಟ್ಟುಕೊಂಡು ಮಂಜುನಾಥ, ಕಲ್ಲಪ್ಪ ಹಾಗೂ ಕಲಬುರಗಿ ನಗರದ ಭೀಮಾಶಂಕರ ಸೇರಿದಂತೆ ಮತ್ತಿತರರು ಸೇರಿಕೊಂಡು ಚಾಕುವಿನಿಂದ ಹಲ್ಲೆ ನಡೆಸಿ ಸಂತೋಷ ಅವರನ್ನು ಹತ್ಯೆ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮೃತದೇಹವನ್ನು ಶವಪರೀಕ್ಷೆಗೆ ರವಾನಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.