Kalaburagi | ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಆರೋಪ: ಶಿವಸೇನಾ ಪಕ್ಷದ ರಾಜ್ಯಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ ವಿರುದ್ಧ ಎಫ್ಐಆರ್
ಆಂದೋಲಾಶ್ರೀ | ಸಿದ್ರಾಮಯ್ಯ ಎಸ್. ಹಿರೇಮಠ
ಕಲಬುರಗಿ: ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಹಾಗೂ ಮಾನಹಾನಿಕರ ಪೋಸ್ಟ್ಗಳನ್ನು ಪ್ರಕಟಿಸಿ, ಪತ್ರಿಕಾಗೋಷ್ಠಿಯಲ್ಲಿ ನಿಂದನಾತ್ಮಕ ಹೇಳಿಕೆ ನೀಡಿ ಜೀವ ಬೆದರಿಕೆ ಹಾಕಿದ್ದಾರೆ ಎಂಬ ಆರೋಪದಲ್ಲಿ ಶಿವಸೇನಾ ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿಯ ವಿರುದ್ಧ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಸೇನಾ ಪಕ್ಷದ ರಾಜ್ಯಾಧ್ಯಕ್ಷ ಸಿದಲಿಂಗಯ್ಯ ಕರುಣಯ್ಯ ಗದ್ದುಗೆ (ಅಂದೋಲಾ ಶ್ರೀ) ಹಾಗೂ ಸಿದ್ರಾಮಯ್ಯ ಹಿರೇಮಠ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಅಫಜಲಪುರ ಪಟ್ಟಣದ ಲಕ್ಷ್ಮೀಗುಡಿ ಸಮೀಪದ ನಿವಾಸಿ ನಾಗಪ್ಪ ಘತ್ತರಗಿ (38) ಎಂಬವರು ನೀಡಿರುವ ದೂರಿನಂತೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಕೋಲಿ-ಕಬ್ಬಲಿಗ ಎಸ್ಟಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಹಾಗೂ ಎಪಿಎಂಸಿ ಮಾಜಿ ನಿರ್ದೇಶಕ ಲಚ್ಚಪ್ಪ ಎಸ್. ಜಮಾದಾರ ಬಗ್ಗೆ ಸೆ.3 ಮತ್ತು 4ರಂದು ‘ಶಿವಸೇನಾ ಪಕ್ಷ’ಹೆಸರಿನ ಫೇಸ್ ಬುಕ್ ಖಾತೆಯಿಂದ ಅವಹೇಳನಕಾರಿ ಪೋಸ್ಟ್ ಪ್ರಕಟಿಸಲಾಗಿದೆ ಎಂದು ನಾಗಪ್ಪ ಪೊಲೀಸ್ ದೂರಿನಲ್ಲಿ ಆರೋಪಿಸಿದ್ದಾರೆ.
ರೈತರ ಪರ ನಡೆಯುತ್ತಿದ್ದ ಹೋರಾಟದಲ್ಲಿ ಭಾಗಿಯಾಗಿದ್ದ ಲಚ್ಚಪ್ಪ ಎಸ್. ಜಮಾದಾರ ಹಾಗೂ ಜಿಲ್ಲಾಧಿಕಾರಿ ಇರುವ ಛಾಯಾಚಿತ್ರವನ್ನು ಬಳಸಿ ಅವಹೇಳನಕಾರಿ ಶೀರ್ಷಿಕೆಯೊಂದಿಗೆ ಪೋಸ್ಟ್ ಪ್ರಕಟಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಅದೇ ರೀತಿ, ರಾಜ್ಯ ಗೃಹಸಚಿವ ಪ್ರಿಯಾಂಕ್ ಖರ್ಗೆಯವರ ಛಾಯಾಚಿತ್ರವನ್ನು ಬಳಸಿಕೊಂಡು ಅವಹೇಳನಕಾರಿ ಹಾಗೂ ಮಾನಹಾನಿಕರ ಅರ್ಥ ಬರುವ ರೀತಿಯಲ್ಲಿ ಮತ್ತೊಂದು ಪೋಸ್ಟ್ ಪ್ರಕಟಿಸಲಾಗಿದೆ ಎಂದು ಆರೋಪಿಸಲಾಗಿದೆ. ಸಿದ್ದು ಅಲಿಯಾಸ್ ಸಿದ್ರಾಮಯ್ಯ ಹಿರೇಮಠ ಅವರ ಫೇಸ್ ಬುಕ್ ಖಾತೆಯಲ್ಲೂ ಅವಹೇಳನಕಾರಿ ಪದಗಳು ಹಾಗೂ ಚಿತ್ರಗಳನ್ನು ಬಳಸಿ ಪೋಸ್ಟ್ ಹರಿಯಬಿಡಲಾಗಿದೆ ಎಂದು ದೂರುದಾರರು ಆರೋಪಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾದ ಪೋಸ್ಟ್ ಗಳು ಹಾಗೂ ಸುದ್ದಿಗೋಷ್ಠಿಯಲ್ಲಿ ನೀಡಿದ ಹೇಳಿಕೆಗಳಿಂದ ಲಚ್ಚಪ್ಪ ಎಸ್. ಜಮಾದಾರ ಅವರ ಸಾಮಾಜಿಕ ಗೌರವ ಮತ್ತು ಪ್ರತಿಷ್ಠೆಗೆ ಧಕ್ಕೆ ಉಂಟಾಗಿದೆ ಎಂದು ದೂರುದಾರರು ಆರೋಪಿಸಿದ್ದಾರೆ.
ಈ ಕುರಿತು ಅಫ್ಝಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.