Kalaburagi | ಸಾಮಾಜಿಕ ಪರಿವರ್ತನೆಗೆ ದಾರಿದೀಪರಾದ ಸಂತ ಕಬೀರದಾಸರು : ಡಾ.ಶಂಕರ ರಾಠೋಡ
ಕಬೀರದಾಸರ ಜಯಂತಿ ಕಾರ್ಯಕ್ರಮದಲ್ಲಿ ಸಮಾನತೆಯ ಸಂದೇಶಕ್ಕೆ ಒತ್ತು
ಕಲಬುರಗಿ: ಸಮಾಜದಲ್ಲಿ ಅಸಮಾನತೆ, ಅಂಧಶ್ರದ್ಧೆ ಹಾಗೂ ಜಾತಿ ವೈಷಮ್ಯದ ವಿರುದ್ಧ ಹೋರಾಡಿ ಸಾಮಾಜಿಕ ಪರಿವರ್ತನೆಗೆ ದಾರಿದೀಪರಾದವರು ಮಹಾನ್ ಸಂತ ಕಬೀರದಾಸರು ಎಂದು ಸರ್ಕಾರಿ ಸ್ವಾಯತ್ತ ಮಹಾವಿದ್ಯಾಲಯದ ಹಿಂದಿ ವಿಭಾಗದ ಮುಖ್ಯಸ್ಥ ಡಾ. ಶಂಕರ ರಾಠೋಡ ಹೇಳಿದರು.
ನಗರದ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ಹಿಂದಿ ವಿಭಾಗದ ವತಿಯಿಂದ ಆಯೋಜಿಸಿದ್ದ ಸಂತ ಕಬೀರದಾಸರ 649ನೇ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಮಧ್ಯಕಾಲೀನ ಭಾರತದಲ್ಲಿ ಸಮಾಜದಲ್ಲಿದ್ದ ಅಸಮಾನತೆ, ಮೂಢನಂಬಿಕೆ ಹಾಗೂ ಅನಿಷ್ಠ ಪದ್ಧತಿಗಳ ವಿರುದ್ಧ ಕಬೀರದಾಸರು ಧ್ವನಿ ಎತ್ತಿ ಸಾಮಾಜಿಕ ಜಾಗೃತಿ ಮೂಡಿಸಿದ ಮಹಾನ್ ಸಂತರು ಎಂದು ಬಣ್ಣಿಸಿದರು.
ಕರ್ನಾಟಕದಲ್ಲಿ ಬಸವೇಶ್ವರರು ಸಾಮಾಜಿಕ ಸುಧಾರಣೆಗೆ ನೀಡಿದ ಕೊಡುಗೆಯಂತೆಯೇ, ಉತ್ತರ ಭಾರತದಲ್ಲಿ ಕಬೀರದಾಸರು ಸಮಾನತೆ ಮತ್ತು ಸಹಬಾಳ್ವೆಯ ಸಂದೇಶ ಸಾರುವ ಮೂಲಕ ಕ್ರಾಂತಿಕಾರಿ ಸಾಮಾಜಿಕ ಚಳವಳಿಗೆ ನಾಂದಿ ಹಾಡಿದರು ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ರಾಜೇಂದ್ರ ಕೊಂಡಾ ಮಾತನಾಡಿ, ಕಬೀರದಾಸರು ಕೇವಲ ಸಂತರು ಮಾತ್ರವಲ್ಲ, ಮಹಾನ್ ದಾರ್ಶನಿಕರು ಮತ್ತು ಸಮಾಜ ಸುಧಾರಕರಾಗಿದ್ದು, ಅವರ ತತ್ವಗಳು ಇಂದಿನ ಸಮಾಜಕ್ಕೂ ಪ್ರಸ್ತುತವಾಗಿವೆ ಎಂದು ಅಭಿಪ್ರಾಯಪಟ್ಟರು.
ಹಿಂದಿ ವಿಭಾಗದ ಮುಖ್ಯಸ್ಥ ಡಾ. ಪ್ರೇಮಚಂದ ಚವ್ಹಾಣ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಕಬೀರದಾಸರ ಜೀವನ, ಸಾಹಿತ್ಯ ಹಾಗೂ ಸಾಮಾಜಿಕ ಚಿಂತನೆಗಳ ಕುರಿತು ವಿವರಿಸಿದರು.
ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ರವೀಂದ್ರ ವೈ.ಎನ್., ಡಾ. ಮೋಹನರಾಜ ಪತ್ತಾರ, ಗ್ರಂಥಪಾಲಕ ಶರಣಪ್ಪ ಎಂ. ಹಾಗೂ ಹಿಂದಿ ವಿಭಾಗದ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಸುಷ್ಮಾ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರೆ, ಕವಿತಾ ಠಾಕೂರ್ ವಂದಿಸಿದರು.