×
Ad

ವರದಕ್ಷಿಣೆ ವಿರುದ್ಧ ಲಂಬಾಣಿ ಸಮುದಾಯದ ಹೋರಾಟ ಶ್ಲಾಘನೀಯ: ಪ್ರಿಯಾಂಕ್ ಖರ್ಗೆ

52 ತಾಂಡಾಗಳಲ್ಲಿ ಜನಜಾಗೃತಿ ಅಭಿಯಾನಕ್ಕೆ ಗೃಹ ಸಚಿವರ ಮೆಚ್ಚುಗೆ

Update: 2026-06-29 18:43 IST

ಕಲಬುರಗಿ: ವರದಕ್ಷಿಣೆ ಎಂಬ ಸಾಮಾಜಿಕ ಪಿಡುಗಿನ ವಿರುದ್ಧ ಲಂಬಾಣಿ ಸಮುದಾಯ ಕೈಗೊಂಡಿರುವ ಹೋರಾಟ ಮತ್ತು ಜಾಗೃತಿ ಅಭಿಯಾನ ಅತ್ಯಂತ ಪ್ರಶಂಸನೀಯ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಶ್ಲಾಘಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ವಿವಿಧ ತಾಂಡಾಗಳಲ್ಲಿ ವರದಕ್ಷಿಣೆ ವಿರೋಧಿ ಅಭಿಯಾನ ಹಮ್ಮಿಕೊಂಡು ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಬಂಜಾರಾ ಕ್ರಾಂತಿ ದಳ ಹಾಗೂ ಸಂತ ಸೇವಾಲಾಲ್ ಜಯಂತಿ ಸಮಿತಿ 52 ತಾಂಡಾಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ತಿಳಿಸಿದ್ದಾರೆ.

ಬಂಜಾರಾ ಸಮುದಾಯದಲ್ಲಿ ಹಿಂದೆ ಸರಳ ವಿವಾಹಗಳಿಗೆ ಆದ್ಯತೆ ನೀಡಲಾಗುತ್ತಿತ್ತು. ಆದರೆ ಕಾಲಕ್ರಮೇಣ ವರದಕ್ಷಿಣೆ ಪದ್ಧತಿ ಸಮುದಾಯದಲ್ಲೂ ವ್ಯಾಪಕವಾಗಿ ಹರಡಿದ್ದು, ಆರ್ಥಿಕವಾಗಿ ದುರ್ಬಲ ವರ್ಗದ ಕುಟುಂಬಗಳಿಗೆ ಇದು ಭಾರವಾಗತೊಡಗಿದೆ ಎಂದು ಅವರು ಹೇಳಿದ್ದಾರೆ.

ಈ ಅನಿಷ್ಟ ಪದ್ಧತಿಯಿಂದ ಸಮುದಾಯದ ಆರ್ಥಿಕ ಸ್ಥಿರತೆಗೆ ಧಕ್ಕೆಯಾಗುತ್ತಿರುವುದನ್ನು ಮನಗಂಡು ಬಂಜಾರಾ ಕ್ರಾಂತಿ ದಳ ಹಾಗೂ ಸಂತ ಸೇವಾಲಾಲ್ ಜಯಂತಿ ಸಮಿತಿಯ ಯುವಕರು ತಾಂಡಾಗಳಲ್ಲಿ ವರದಕ್ಷಿಣೆ ವಿರುದ್ಧ ಜನಜಾಗೃತಿ ಮೂಡಿಸುತ್ತಿದ್ದಾರೆ. ಇನ್ನು ಮುಂದೆ ಬಂಜಾರಾ ಸಮುದಾಯದಲ್ಲಿ ವರದಕ್ಷಿಣೆ ಕೊಡುವುದು ಹಾಗೂ ಪಡೆಯುವುದನ್ನು ಸಂಪೂರ್ಣವಾಗಿ ತೊರೆಯುವ ನಿರ್ಧಾರಕ್ಕೆ ಜನರು ಬರುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ವರದಕ್ಷಿಣೆಯಂತಹ ಸಾಮಾಜಿಕ ಪಿಡುಗಿನ ವಿರುದ್ಧ ಜಾಗೃತಿ ಮೂಡಿಸುತ್ತಿರುವ ಪ್ರತಿಯೊಬ್ಬರೂ ಸಮಾಜಕ್ಕೆ ಮಾದರಿಯಾಗುವಂತಹ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಶಂಸಿಸಿದ ಅವರು, ಜಿಲ್ಲೆಯ ಎಲ್ಲಾ ಗ್ರಾಮಗಳು ಹಾಗೂ ತಾಂಡಾಗಳಲ್ಲಿ ಇಂತಹ ನಿರ್ಧಾರಗಳು ಮೂಡಿಬಂದು, ವರದಕ್ಷಿಣೆ ನಿರ್ಮೂಲನೆಗಾಗಿ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದ್ದಾರೆ.

ಸಾಮಾಜಿಕ ಬದಲಾವಣೆಯ ಈ ಮಹತ್ವದ ಪ್ರಯತ್ನದಲ್ಲಿ ಪ್ರತಿಯೊಬ್ಬರೂ ಭಾಗಿಯಾಗುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಮನವಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News