×
Ad

ಅಫಜಲಪುರ | ಭೀಮಾ ನದಿಯ ಬ್ಯಾರೇಜ್‌ಗಳಿಗೆ ಗೇಟ್ ಅಳವಡಿಸಿ ನೀರು ಸಂಗ್ರಹಿಸುವಂತೆ ರೈತರ ಆಗ್ರಹ

Update: 2026-01-29 17:17 IST

ಅಫಜಲಪುರ : ಭೀಮಾ ನದಿಗೆ ಅಫಜಲಪುರ ತಾಲ್ಲೂಕಿನಲ್ಲಿ ನಿರ್ಮಿಸಲಾದ ಬ್ಯಾರೇಜ್‌ಗಳಿಗೆ ಗೇಟ್ ಅಳವಡಿಸಿ ಸಮರ್ಪಕವಾಗಿ ನೀರು ಸಂಗ್ರಹಿಸಬೇಕು ಎಂದು ಆಗ್ರಹಿಸಿ ಸ್ವಾಭಿಮಾನಿ ಕಬ್ಬು ಬೆಳೆಗಾರರ ಐಕ್ಯ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ರೈತ ಮುಖಂಡರು, ಅಫಜಲಪುರ ತಾಲ್ಲೂಕಿನ ಸೊನ್ನ ಬ್ಯಾರೇಜ್‌ಗೆ 3.1 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯವಿದ್ದರೂ, ಪ್ರಸ್ತುತ ಕೇವಲ 2.1 ಟಿಎಂಸಿ ನೀರಷ್ಟೇ ಸಂಗ್ರಹವಾಗಿದೆ. ಕಳೆದ 20 ವರ್ಷಗಳಿಂದ ಸಮರ್ಪಕವಾಗಿ ನೀರು ಸಂಗ್ರಹವಾಗದೇ ಇರುವುದರಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆರೋಪಿಸಿದರು.

ಸೊನ್ನ ಬ್ಯಾರೇಜ್‌ನಿಂದ ಹಳ್ಳಿಗೆ ಹಾಗೂ ಬಳೂಂಡಗಿ ಕಾಲುವೆಗೆ ನೀರು ಹರಿಯಬೇಕಾಗಿದ್ದರೂ, ಬ್ಯಾರೇಜ್ ಹಿನ್ನೀರಿನ ಮಟ್ಟ ಕಡಿಮೆಯಾಗಿರುವುದರಿಂದ ಹಿನ್ನೀರಿನ ಪ್ರದೇಶದ ಗ್ರಾಮಗಳ ರೈತರು, ಪಶುಸಂಗೋಪನೆ ನಡೆಸುತ್ತಿರುವವರು ಹಾಗೂ ನದಿ ನೀರನ್ನೇ ಅವಲಂಬಿಸಿ ಕಬ್ಬು ನಾಟಿ ಮಾಡಿದ ರೈತರ ಪರಿಸ್ಥಿತಿ ದಯನೀಯವಾಗಿದೆ ಎಂದು ತಿಳಿಸಿದರು.

ಭೀಮಾ ನದಿಯಲ್ಲಿ ನೀರು ಸಂಗ್ರಹಿಸಲು ಬಳಗಾನೂರ ಡಿಸ್ಟ್ರಿಬ್ಯೂಟರ್ 84.5 ಕೆಎಫ್‌ನಿಂದ ನೀರು ತುಂಬಿ ಸಂಗ್ರಹಿಸುವ ಅಗತ್ಯವಿದೆ ಎಂದು ರೈತರು ಒತ್ತಾಯಿಸಿದರು.

ಫೆಬ್ರವರಿ 12ರೊಳಗಾಗಿ ಸೊನ್ನ ಬ್ಯಾರೇಜ್‌ಗೆ ಗೇಟ್ ಅಳವಡಿಸಿ ನೀರು ನಿಲ್ಲಿಸುವ ಕ್ರಮ ಕೈಗೊಳ್ಳದಿದ್ದರೆ, ಫೆಬ್ರವರಿ 13ರಿಂದ ಧರಣಿ ಸತ್ಯಾಗ್ರಹ ಆರಂಭಿಸಲಾಗುವುದು ಎಂದು ರೈತ ಮುಖಂಡರು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಗುರು ಚಾಂದಕವಟೆ, ಶಾಂತು ಅಂಜುಟಗಿ, ಮಹಾಂತಗೌಡ ಪಾಟೀಲ, ಶರಣು ದಿವಾಣಜಿ, ರಮೇಶ್ ಪಾಟೀಲ, ಯಲ್ಲಪ್ಪ ನೆಲೋಗಿ, ನೂರ ಅಹ್ಮದ್ ಭಾಗವಾನ್, ದತ್ತುಗೌಡ ಪಾಟೀಲ, ಸಂಗಣ್ಣ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News