ಚಿತ್ತಾಪುರ | ಅಹೋರಾತ್ರಿ ಧರಣಿ ಹಿಂಪಡೆದ ರೈತರು
ಚಿತ್ತಾಪುರ : ತಾಲೂಕಿನ ಸೂಲಹಳ್ಳಿ ಸಮೀಪದ ಶ್ರೀ ಸಿಮೆಂಟ್ ಕಂಪನಿಯ ಕ್ಲಿಂಕರ್ ಸಾಗಾಟ ಘಟಕದಿಂದ ಉಂಟಾಗುತ್ತಿರುವ ಧೂಳಿನಿಂದ ಸುಮಾರು 200 ಎಕರೆ ಬೆಳೆ ಹಾನಿಯಾಗಿರುವುದಕ್ಕೆ ಪರಿಹಾರ ಹಾಗೂ ಹೊಲಗಳಿಗೆ ತೆರಳಲು ರಸ್ತೆ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿ ರೈತರು ನಡೆಸುತ್ತಿದ್ದ ಅಹೋರಾತ್ರಿ ಧರಣಿಯನ್ನು ಬುಧವಾರ ಹಿಂಪಡೆದುಕೊಂಡರು.
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತರು ಮಂಗಳವಾರ ರಾತ್ರಿ ಧರಣಿ ಆರಂಭಿಸಿದ್ದರು. ವಿಷಯ ತಿಳಿದ ಶ್ರೀ ಸಿಮೆಂಟ್ ಕಂಪನಿಯ ಅಧಿಕಾರಿಗಳು ಬುಧವಾರ ಧರಣಿ ಸ್ಥಳಕ್ಕೆ ಭೇಟಿ ನೀಡಿ, ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ರೈತರು ಧರಣಿಯನ್ನು ಹಿಂಪಡೆದುಕೊಂಡರು.
ರೈತ ಮುಖಂಡ ರಮೇಶ್ ಬೊಮ್ಮನಳ್ಳಿ ಮಾತನಾಡಿ, ಸೂಲಹಳ್ಳಿ ಸ್ಟೇಷನ್ ಸಮೀಪ ನಡೆಯುತ್ತಿರುವ ಶ್ರೀ ಸಿಮೆಂಟ್ ಕಂಪನಿಯ ರೈಲ್ವೆ ಕಾಮಗಾರಿಯಿಂದ ರೈತರ ಹೊಲಗಳಿಗೆ ತೀವ್ರ ತೊಂದರೆ ಆಗುತ್ತಿದೆ. ಮೂಲ ರಸ್ತೆ ಹಾಗೂ ಸರ್ಕಾರಿ ಹಣಾದಿಗಳನ್ನು ಒತ್ತುವರಿ ಮಾಡಿಕೊಂಡು ರೈಲ್ವೆ ಹಳಿ ನಿರ್ಮಿಸಿರುವುದರಿಂದ ರೈತರಿಗೆ ತಮ್ಮ ಹೊಲಗಳಿಗೆ ತೆರಳಲು ಹಾಗೂ ಮರಳಲು ಸೂಕ್ತ ಮಾರ್ಗವಿಲ್ಲದೆ ಸಮಸ್ಯೆ ಎದುರಾಗುತ್ತಿದೆ ಎಂದು ದೂರಿದರು.
ಈ ವರ್ಷ ಮಳೆಯ ಪ್ರಮಾಣ ಹೆಚ್ಚಿರುವ ಹಿನ್ನೆಲೆಯಲ್ಲಿ, ಕಂಪನಿಯವರು ನೀಡಿದ್ದ ಭರವಸೆಯಂತೆ ರಸ್ತೆಯ ಎರಡೂ ಬದಿಯಲ್ಲಿ ನಾಲೆ ನಿರ್ಮಾಣ ಮಾಡಲಾಗಿಲ್ಲ ಎಂದು ಅವರು ಆರೋಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕಂಪನಿ ಅಧಿಕಾರಿಗಳು, ಹೊಲಗಳಿಗೆ ತೆರಳಲು ರಸ್ತೆ ಮತ್ತು ನಾಲೆ ನಿರ್ಮಾಣ ಮಾಡಲಾಗುವುದು. ಬೆಳೆ ಹಾನಿ ಕುರಿತು ಕೃಷಿ ಇಲಾಖೆಯ ವರದಿ ಬಂದ ನಂತರ ಸೂಕ್ತ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕಂಪನಿ ಅಧಿಕಾರಿಗಳಾದ ನರಸಿಂಗ್, ರಮನಾಗೌಡ, ಕಂದಾಯ ನಿರೀಕ್ಷಕ ಮೈನೋದ್ದಿನ್, ರೈತರಾದ ನಾಗರಾಜ ರೇಷ್ಮಿ, ಮಲ್ಲಿಕಾರ್ಜುನ ರೆಡ್ಡಿ ಆಲೂರ, ಸಿದ್ದು ರೇಷ್ಮಿ, ರವಿ ಗಂಗಾಣಿ, ಅಂಬು, ತಿಮ್ಮಯ್ಯ ಭೋವಿ ಸೇರಿದಂತೆ ಇತರರು ಉಪಸ್ಥಿತರಿದ್ದರು.