Kalaburagi | ಆ.30, ಸೆ.19, 20ರಂದು ಮತದಾರರ ವಿಶೇಷ ನೋಂದಣಿ ಅಭಿಯಾನ: ಡಿಸಿ ಇಕ್ರಮ್ ಶರೀಫ್
ಕಲಬುರಗಿ: ವಿಶೇಷ ಸಂಕ್ಷಿಪ್ತ ಮತದಾರರ ಪರಿಷ್ಕರಣೆ (ಎಸ್‌ಐಆರ್-2026) ಕರಡು ಪಟ್ಟಿ ಪ್ರಕಟವಾಗಿದ್ದು, ಪಟ್ಟಿಯಲ್ಲಿ ಹೆಸರು ಇಲ್ಲದ ಅರ್ಹ ಮತದಾರರು ಆಗಸ್ಟ್ 30 ಹಾಗೂ ಸೆಪ್ಟೆಂಬರ್ 19 ಮತ್ತು 20ರಂದು ನಡೆಯುವ ವಿಶೇಷ ಮತದಾರರ ನೋಂದಣಿ ಅಭಿಯಾನದಲ್ಲಿ ಭಾಗವಹಿಸಿ ತಮ್ಮ ಹೆಸರು ಸೇರಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಇಕ್ರಮ್ ಶರೀಫ್ ಮನವಿ ಮಾಡಿದ್ದಾರೆ.
ಜಿಲ್ಲೆಯ ಎಲ್ಲ ಮತಗಟ್ಟೆಗಳಲ್ಲಿ ನಡೆಯುವ ವಿಶೇಷ ನೋಂದಣಿ ಅಭಿಯಾನದಲ್ಲಿ ಬೂತ್ ಮಟ್ಟದ ಅಧಿಕಾರಿಗಳನ್ನು (ಬಿಎಲ್‌ಒ) ಸಂಪರ್ಕಿಸಿ ನಮೂನೆ-6 ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಿದರೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿಕೊಳ್ಳಬಹುದು ಎಂದು ತಿಳಿಸಿದ್ದಾರೆ.
ಎಸ್‌ಐಆರ್-2026 ಕರಡು ಪಟ್ಟಿಯ ಪ್ರಕಾರ ಕಲಬುರಗಿ ಜಿಲ್ಲೆಯಲ್ಲಿ 9,40,251 ಪುರುಷರು, 9,09,121 ಮಹಿಳೆಯರು ಹಾಗೂ 213 ಇತರೆ ಸೇರಿ ಒಟ್ಟು 18,49,585 ಮತದಾರರು ಇದ್ದಾರೆ.
2002ರ ಎಸ್‌ಐಆರ್ ಪಟ್ಟಿಗೆ ಸಂಬಂಧಿಸಿದ ಮಾಹಿತಿ ಸಲ್ಲಿಸದ ಕಾರಣದಿಂದ 1,05,486 ಮತದಾರರನ್ನು ಸಂಶಯಾಸ್ಪದ ಪಟ್ಟಿಗೆ ಸೇರಿಸಲಾಗಿದ್ದು, ಅವರಿಗೆ ನೋಟಿಸ್ ನೀಡುವ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಮತದಾರರ ಪರಿಶೀಲನೆ ಮತ್ತು ವಿಚಾರಣೆ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಈಗಿರುವ ಒಂಬತ್ತು ಸಹಾಯಕ ಚುನಾವಣಾ ನೋಂದಣಿ ಅಧಿಕಾರಿಗಳ (ಎಇಆರ್‌ಒ) ಜೊತೆಗೆ ಹೆಚ್ಚುವರಿಯಾಗಿ 67 ಅಧಿಕಾರಿಗಳನ್ನು ಎಇಆರ್‌ಒಗಳಾಗಿ ನಿಯೋಜಿಸಲಾಗಿದೆ.
ನೋಟಿಸ್ ಪಡೆದ ಮತದಾರರು ನಿಗದಿತ ದಿನಾಂಕದಂದು ಅಗತ್ಯ ದಾಖಲಾತಿಗಳೊಂದಿಗೆ ವಿಚಾರಣೆಗೆ ಹಾಜರಾಗಿ ಸಹಕರಿಸುವಂತೆ ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಮನವಿ ಮಾಡಿದ್ದಾರೆ.