×
Ad

ಕಾಳಗಿ: ಬರಗಾಲ ಘೋಷಣೆಗೆ ಆಗ್ರಹಿಸಿ ಎತ್ತಿನ ಬಂಡಿ, ಟ್ರ್ಯಾಕ್ಟರ್‌ಗಳೊಂದಿಗೆ ರೈತರಿಂದ ಬೃಹತ್ ಪ್ರತಿಭಟನೆ

Update: 2026-07-13 21:10 IST

ಕಾಳಗಿ: ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಕಾಳಗಿ ತಾಲೂಕಿನಲ್ಲಿ ತೀವ್ರ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೂಡಲೇ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ ರೈತರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ನೇತೃತ್ವದಲ್ಲಿ ಸೋಮವಾರ ನೂರಾರು ರೈತರು ಎತ್ತಿನ ಬಂಡಿ ಮತ್ತು ಟ್ರ್ಯಾಕ್ಟರ್‌ಗಳೊಂದಿಗೆ ಬೃಹತ್ ಪ್ರತಿಭಟನೆ ನಡೆಸಿದರು.

ಪಟ್ಟಣದ ಬಸವೇಶ್ವರ ವೃತ್ತದಿಂದ ಅಂಬೇಡ್ಕರ್ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ರೈತರು ಬಳಿಕ ಕಲಬುರಗಿ–ಚಿಂಚೋಳಿ ರಾಜ್ಯ ಹೆದ್ದಾರಿಯನ್ನು ಸುಮಾರು ನಾಲ್ಕು ಗಂಟೆಗಳ ಕಾಲ ಬಂದ್ ಮಾಡಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಹೆದ್ದಾರಿ ಬಂದ್‌ನಿಂದ ಬಸ್ ಸೇರಿದಂತೆ ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡಿತು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ತಾಲೂಕು ಅಧ್ಯಕ್ಷ ವೀರಣ್ಣ ಗಂಗಾಣಿ, ಮುಂಗಾರು ಮಳೆ ಕೊರತೆಯಿಂದ ಬಿತ್ತನೆ ಮಾಡಿದ ಬೆಳೆಗಳು ಮೊಳಕೆಯಲ್ಲಿಯೇ ಒಣಗುತ್ತಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ತಕ್ಷಣ ಬರಗಾಲ ಘೋಷಿಸಿ ರೈತರ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದರು.

ರೈತ ಮುಖಂಡ ಮಲ್ಲಿಕಾರ್ಜುನ ರುದನೂರ ಮಾತನಾಡಿ, ಕಲಬುರಗಿ ಜಿಲ್ಲೆಯಲ್ಲಿ ಮಳೆಗಾಲ ಆರಂಭವಾಗಿ ಒಂದೂವರೆ ತಿಂಗಳು ಕಳೆದರೂ ಸಮರ್ಪಕ ಮಳೆಯಾಗಿಲ್ಲ. ರೈತರು ಸಾಲ ಮಾಡಿ ಬಿತ್ತನೆ ನಡೆಸಿದ್ದು, ಇದೀಗ ಆಕಾಶದತ್ತ ಮುಖ ಮಾಡಿ ಕುಳಿತಿದ್ದಾರೆ. ಜಿಲ್ಲೆಯ ಉಸ್ತುವಾರಿ ಸಚಿವರು ರೈತರ ಸಮಸ್ಯೆಗಳಿಗಿಂತ ಆರ್‌ಎಸ್‌ಎಸ್ ವಿಚಾರಗಳ ಬಗ್ಗೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ ಎಂದು ಟೀಕಿಸಿದರು.

ರಾಜಕೀಯ ನಾಯಕರು ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಬದಲು ಅಧಿಕಾರದ ಕಿತ್ತಾಟದಲ್ಲಿ ತೊಡಗಿದ್ದಾರೆ. ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಸಾಕಷ್ಟು ದಿನಗಳಾದರೂ ಕೃಷಿ ಇಲಾಖೆಗೆ ಪೂರ್ಣ ಪ್ರಮಾಣದ ಗಮನ ನೀಡಲಾಗಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಭರತನೂರ ಚಿಕ್ಕಗುರುನಂಜೇಶ್ವರ ಮಹಾಸ್ವಾಮಿಗಳು, ಮಂಗಲಗಿ ಡಾ. ಶಾಂತಸೋಮನಾಥ ಶಿವಾಚಾರ್ಯರು, ರಟಕಲ್ ರೇವಣಸಿದ್ಧ ಶಿವಾಚಾರ್ಯರು ಹಾಗೂ ರೈತ ಮುಖಂಡರಾದ ಭೀಮರಾಯ ಮಲಘಾಣ, ಗೌರಿಶಂಕರ ಸೂರವಾರ, ಮೋಹನ್ ಚಿನ್ನ, ಮಶಾಕ್ ಪಟೇಲ್, ಭರತ ಬುಳ್ಳ, ಮಾರುತಿ ಗಂಜರಗಿ, ಅವಿನಾಶ್ ಗುತ್ತೇದಾರ, ಕುಪೇಂದ್ರ ರಾಯಕೋಡ, ಸುಂದರ ಸಾಗರ, ಕರಣ ರಾಜಾಪೂರ ಮತ್ತು ಪ್ರೇಮಕುಮಾರ ಸುಂಠಾಣ ಮಾತನಾಡಿ ಸರ್ಕಾರದ ಗಮನ ಸೆಳೆದರು.

ಕಾಳಗಿ ತಾಲೂಕನ್ನು ತಕ್ಷಣ ಬರಪೀಡಿತ ಪ್ರದೇಶವೆಂದು ಘೋಷಿಸುವುದು, ಪ್ರತಿ ಎಕರೆಗೆ 25 ಸಾವಿರ ರೂ. ಪರಿಹಾರ ನೀಡುವುದು, ಕಳೆದ ಸಾಲಿನ ಬೆಳೆಹಾನಿ ಪರಿಹಾರವನ್ನು ಬಾಕಿ ಉಳಿದ ರೈತರಿಗೆ ಬಿಡುಗಡೆ ಮಾಡುವುದು, ಮೋಡ ಬಿತ್ತನೆ ಕೈಗೊಳ್ಳುವುದು, ಸಹಕಾರ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳ ಕೃಷಿ ಸಾಲ ಮನ್ನಾ ಮಾಡುವುದು, ಉಚಿತ ಮೇವು ವಿತರಣಾ ಕೇಂದ್ರ ತೆರೆಯುವುದು, ಕಬ್ಬಿಗೆ ಪ್ರತಿ ಟನ್‌ಗೆ 5,500 ರೂ. ಬೆಂಬಲ ಬೆಲೆ ನಿಗದಿಪಡಿಸುವುದು, ರೈತರಿಗೆ ಹಗಲು ಮೂರು ಹಂತದ ವಿದ್ಯುತ್ 10 ಗಂಟೆ ಹಾಗೂ ರಾತ್ರಿ ಏಕ ಹಂತದ ವಿದ್ಯುತ್ 12 ಗಂಟೆ ಪೂರೈಸುವುದು, ಹಾಳಾಗಿರುವ ವಿದ್ಯುತ್ ಕಂಬ ಹಾಗೂ ತಂತಿಗಳನ್ನು ದುರಸ್ತಿಗೊಳಿಸುವುದು, ಬೆಣ್ಣೆತೋರೆ ಕಾಲುವೆಗೆ ನೀರು ಹರಿಸುವುದು, ರೈತರಿಗೆ ಮಾಸಿಕ ಪ್ರೋತ್ಸಾಹಧನ ನೀಡುವುದು, ರೈತ ಮಕ್ಕಳಿಗೆ ವಿದ್ಯಾನಿಧಿ ಸೌಲಭ್ಯ, ಉಚಿತ ಬೀಜ-ಗೊಬ್ಬರ, ಬೆಳೆ ವಿಮೆ ಹಣ ಬಿಡುಗಡೆ, ಎಂಎಸ್‌ಪಿ ಕಾಯ್ದೆ ಜಾರಿ ಹಾಗೂ ವಿದ್ಯುತ್ ಖಾಸಗೀಕರಣ ಕೈಬಿಡುವಂತೆ ಅವರು ಒತ್ತಾಯಿಸಿದರು.

ಬಳಿಕ ತಹಶೀಲ್ದಾರ್ ಪೃಥ್ವಿರಾಜ್ ಪಾಟೀಲ, ತಾಪಂ ಇಒ ಡಾ. ಬಸಲಿಂಗಪ್ಪ ಡಿಗ್ಗಿ, ಜೆಸ್ಕಾಂ ಎಇಇ ಇಲಿಯಾಸ್ ಅಹ್ಮದ್, ಅರಣ್ಯಾಧಿಕಾರಿ ಜಗನ್ನಾಥ ಕೊರಳ್ಳಿ ಹಾಗೂ ಕೃಷಿ ಇಲಾಖೆ ಅಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯ ವೇಳೆ ರೈತರು ಹೆದ್ದಾರಿಯಲ್ಲೇ ಸುಡು ಬಿಸಿಲಿನಲ್ಲಿ ಕಡಕ್ ರೊಟ್ಟಿ ಮತ್ತು ಪುಂಡಿ ಪಲ್ಯ ಸೇವಿಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಶಿವರಾಜ್ ಪಾಟೀಲ ಗೊಣಗಿ, ರಮೇಶ್ ಹೆಬ್ಬಾಳ, ಮಲ್ಲಿಕಾರ್ಜುನ ಹೂಗಾರ, ಶೇಖರ ಮಾನಶೆಟ್ಟಿ, ಶರಣು ಬೆಲೂರ, ಸಿದ್ರಾಮಪ್ಪ ಮಂಗಲಗಿ, ರಮೇಶ್ ಆಡಕಿ, ಕಾಶಿನಾಥ ಸುಂಠಾಣ, ಮಲ್ಲಿನಾಥ ಹಲಚೇರಾ, ಪೃಥ್ವಿರಾಜ್ ನಾಮದಾರ, ಚಂದ್ರಕಾಂತ ಚವ್ಹಾಣ, ರಾಜು ಸೀಳಿನ್, ನಾಗರಾಜ ಕೇಶ್ವಾರ, ಮಲ್ಲಿನಾಥ ಪಾಟೀಲ ಹುಳಗೇರಾ, ದಯಾಸಾಗರ ಪಾಟೀಲ ಭೆಡಸೂರ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.



 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News