×
Ad

Kalaburagi | ಜು.16ರಂದು ‘ಪುಟ್ಟರಾಜ ಕೊಟ್ಟ ಜ್ಞಾನ, ಗಾನ, ಮಾನ’ ವಿಶೇಷ ಕಾರ್ಯಕ್ರಮ

31 ಮಂದಿ ಪ್ರವಚನಕಾರರಿಗೆ ‘ಪ್ರವಚನ ಪ್ರವೀಣ’ ಪ್ರಶಸ್ತಿ

Update: 2026-07-12 20:09 IST

ಕಲಬುರಗಿ: ಗಾನಯೋಗಿ ಪಂಡಿತ ಪುಟ್ಟರಾಜ ಕವಿ ಗವಾಯಿಗಳನ್ನು ಸ್ಮರಿಸುವ ಉದ್ದೇಶದಿಂದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಚಿತ್ತಾಪುರದ ಶ್ರೀ ರಾಗ ಸಂಗಮ ಸೇವಾ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ‘ಪುಟ್ಟರಾಜ ಕೊಟ್ಟ ಜ್ಞಾನ, ಗಾನ, ಮಾನ, ದಾತ, ನಾದದ ನವನೀತ’ ವಿಶೇಷ ಕಾರ್ಯಕ್ರಮವನ್ನು ಜುಲೈ 16ರಂದು ಸಂಜೆ 4.45ಕ್ಕೆ ನಗರದ ಕನ್ನಡ ಭವನದಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದ್ದಾರೆ.

ನಗರದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಡಿತ ಪುಟ್ಟರಾಜ ಕವಿ ಗವಾಯಿಗಳು ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಮಹಾನ್ ಸಾಧಕರಾಗಿದ್ದು, ಸಾವಿರಾರು ಅಂಧ, ಅನಾಥ ಹಾಗೂ ಅಂಗವಿಕಲ ಮಕ್ಕಳಿಗೆ ಅನ್ನ, ಆಶ್ರಯ, ಶಿಕ್ಷಣ ಮತ್ತು ಬದುಕಿನ ದಾರಿ ತೋರಿಸುವ ಮೂಲಕ ಮಾನವೀಯ ಸೇವೆಯ ಆದರ್ಶವನ್ನು ಸ್ಥಾಪಿಸಿದ್ದಾರೆ. ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಅವರ ಕೊಡುಗೆ ಅನನ್ಯವಾಗಿದ್ದು, ಇಂತಹ ಮಹನೀಯರನ್ನು ಸ್ಮರಿಸುವುದು ಸಮಾಜದ ಕರ್ತವ್ಯವಾಗಿದೆ ಎಂದು ಹೇಳಿದರು.

ಕಾರ್ಯಕ್ರಮವು ಚಿನ್ಮಯಗಿರಿ ಮಹಾಂತೇಶ್ವರ ಮಠದ ಶ್ರೀ ವೀರ ಮಹಾಂತ ಶಿವಾಚಾರ್ಯರ ದಿವ್ಯ ಸಾನ್ನಿಧ್ಯದಲ್ಲಿ ನಡೆಯಲಿದ್ದು, ಡಿಸಿಸಿ ಬ್ಯಾಂಕ್ ನಿರ್ದೇಶಕ ಗೌತಮ ವೈಜನಾಥ ಪಾಟೀಲ ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಚನ್ನಮಲ್ಲಯ್ಯ ಹಿರೇಮಠ (ಜೇವರ್ಗಿ), ಡಿ.ಕೆ. ದವಲಸಾಬ್ (ಕೊಡೇಕಲ್), ಸಂಗೀತ ಕಲಾವಿದ ಜಗದೀಶ ಶರಣರು, ಮಹಿಳಾ ಸಂಘಟಕಿ ಜಯಶ್ರೀ ಮುಚಳಂಬಿ ಹಾಗೂ ಶ್ರೀ ರಾಗ ಸಂಗಮ ಸೇವಾ ಟ್ರಸ್ಟ್ ಅಧ್ಯಕ್ಷೆ ಸ್ವೇತಾ ಆರ್. ಪಾಟೀಲ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಜಯಕುಮಾರ ಪಾಟೀಲ ತೇಗಲತಿಪ್ಪಿ ವಹಿಸಲಿದ್ದಾರೆ.

ಕಾರ್ಯಕ್ರಮದ ಅಂಗವಾಗಿ ಜಿಲ್ಲೆಯಾದ್ಯಂತ ಹಲವು ವರ್ಷಗಳಿಂದ ಪ್ರವಚನಗಳ ಮೂಲಕ ಸಾಮಾಜಿಕ ಹಾಗೂ ಆಧ್ಯಾತ್ಮಿಕ ಜಾಗೃತಿ ಮೂಡಿಸುತ್ತಿರುವ 31 ಮಂದಿ ಖ್ಯಾತ ಪ್ರವಚನಕಾರರಿಗೆ ‘ಪ್ರವಚನ ಪ್ರವೀಣ’ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು ಎಂದು ಅವರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News