ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಂದ ಚಿತ್ತಾಪುರ ಕ್ಷೇತ್ರ ಅಭಿವೃದ್ಧಿ: ಮಲ್ಲಿಕಾರ್ಜುನ ಕಾಳಗಿ
ಚಿತ್ತಾಪುರ: ತಾಲೂಕಿನಲ್ಲಿ ರೂ. 1200 ಕೋಟಿಯ ಅಭಿವೃದ್ಧಿ ಕಾರ್ಯಗಳು ಕ್ಷೇತ್ರದ ಪ್ರತಿಯೊಂದು ಹಳ್ಳಿಗಳಲ್ಲಿ ನಡೆಯುತ್ತಿವೆ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಸಚಿವರು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ ಬಿಜೆಪಿ ಮುಖಂಡರಿಗೆ ತಿರುಗೇಟು ನೀಡಿದರು.
ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಮುಖಂಡ ಆರ್.ರುದ್ರಯ್ಯ ಅವರಿಗೆ ಅಭಿವೃದ್ಧಿಯ ಬಗ್ಗೆ ಮಾಹಿತಿ ಬೇಕಾದಲ್ಲಿ ಆಯಾ ಇಲಾಖೆಗಳ ಅಧಿಕಾರಿಗಳನ್ನು ಭೇಟಿ ಮಾಡಿ ಸಮಗ್ರ ಮಾಹಿತಿ ಪಡೆಯಲಿ ಎಂದು ತಿರುಗೇಟು ನೀಡಿದರು.
ಅಭಿವೃದ್ಧಿ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬಿಜೆಪಿಯವರು ಸಲಹೆ ನೀಡುವ ಅಗತ್ಯವಿಲ್ಲ. ಅವರು ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿರುತ್ತಾರೆ. ಬಿಜೆಪಿ ತಾಲೂಕು ಅಧ್ಯಕ್ಷರು ಕ್ಯಾಬಿನೆಟ್ ದರ್ಜೆಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಬಗ್ಗೆ ಗೌರವದಿಂದ ಮಾತನಾಡುವುದನ್ನು ಕಲಿಯಿರಿ ಎಂದು ಕಿವಿಮಾತು ಹೇಳಿದರು.
ದಂಡೋತಿ ಗ್ರಾಮದ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿಷಾಹಾರ ಸೇವಿಸಿ ಅಸ್ವಸ್ಥಗೊಂಡ ವಿದ್ಯಾರ್ಥಿಗಳು ತಾಲೂಕು ಆಸ್ಪತ್ರೆಗೆ ದಾಖಲುಗೊಂಡು ಚಿಕಿತ್ಸೆ ಪಡೆಯುತ್ತಿರುವಾಗ ಬಿಜೆಪಿಯವರು ಸುಖಾಸುಮ್ಮನೆ ಅಡಚಣೆ ಉಂಟುಮಾಡಿದ್ದಾರೆ. ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಎಲ್ಲೋ ಕುಳಿತುಕೊಂಡು ಸುಳ್ಳು ಮಾಹಿತಿ ಹಂಚಿಕೊಂಡಿದ್ದಾರೆ ಅಲ್ಲದೇ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಅವಾಚ್ಯ ಹಾಗೂ ಅಶ್ಲೀಲ ಪದಗಳಿಂದ ನಿಂದಿಸಿದ್ದಾರೆ. ಹೀಗಾಗಿ ಮಣಿಕಂಠ ರಾಠೋಡ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದರು.
ಅನಾವಶ್ಯಕ ಅಶ್ಲೀಲ ಪದಗಳ ಬಳಕೆ ಮಾಡಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬೈದಿದ್ದ ಮಣಿಕಂಠ ರಾಠೋಡ ವಿರುದ್ಧ ಜು.10 ರಂದು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ. ಜು.11 ರಂದು ಪ್ರಕರಣ ದಾಖಲಾಗಿದೆ ಎಂದು ತಿಳಿಸಿದರು.
ಪುರಸಭೆ ಮಾಜಿ ಉಪಾಧ್ಯಕ್ಷ ರಸೂಲ್ ಮುಸ್ತಫಾ ಮಾತನಾಡಿ, ಮಣಿಕಂಠ ರಾಠೋಡ ಯಾವಾಗಲೂ ಸಮಾಜದಲ್ಲಿ ಅಶಾಂತಿ ಮೂಡಿಸುವ ಜಗಳ ಹಚ್ಚುವ ಕೆಲಸ ಮಾಡುತ್ತಾರೆ. ಲೀಡರ್ ಆಗುವುದಕ್ಕಿಂತ ಮೊದಲು ನಾಲಿಗೆ ಹಿಡಿತದಲ್ಲಿಟ್ಟುಕೊಂಡು ಮಾತನಾಡುವುದು ಕಲಿಯಲಿ ಎಂದು ಕಿವಿಮಾತು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಮಲ್ಲಿಕಾರ್ಜುನ ಬೆಣ್ಣೂರಕರ್, ಅಹ್ಮದ್ ಸೇಠ್, ಜಗನ್ನಾಥ್ ಮುಡಬೂಳಕರ್, ಶ್ರೀಕಾಂತ್ ಸಿಂಧೆ, ಲೋಹಿತ್ ಮುದ್ದಡಗಿ, ಸೂರಜ್ ಕಲ್ಲಕ್ ಇದ್ದರು.