ಕಾಳಗಿ : ತಾಲೂಕಿನ ಕೋಡ್ಲಿ ಗ್ರಾಮ‌ ಪಂಚಾಯತ್ ವ್ಯಾಪ್ತಿಯ ಸುಂಠಾಣ ಬಡಾ ತಾಂಡದಲ್ಲಿ ಕಳೆದ ವಾರದಿಂದ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ಒಂದು ಕೊಡ ನೀರಿಗಾಗಿ ಮೂರು ಕಿ.ಮೀ ದೂರದ ಸುಂಠಾಣ ಗ್ರಾಮಕ್ಕೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸುಂಠಾಣ ಬಡಾ ತಾಂಡದಲ್ಲಿ ‌ಸುಮಾರು 300ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದ್ದು, ತಾಂಡಕ್ಕೆ ಹುಲಸಗೂಡ ಕ್ರಾಸ್ ನಿಂದ ಕುಡಿಯುವ ನೀರಿನ ಸಂಪರ್ಕ ವ್ಯವಸ್ಥೆ ಇದೆ. ಆದರೆ ಕಳೆದ ವಾರದ ಹಿಂದೆ‌ ಕುಡಿಯುವ ನೀರಿನ ಪೈಪ್ ಲೈನ್ ಒಡೆದು ಹೋದ ಕಾರಣ ನೀರಿನ ಸಮಸ್ಯೆ ಉಂಟಾಗಿದೆ ಎಂದು ತಾಂಡ ನಿವಾಸಿಗಳು ತಮ್ಮ ಅಳಲನ್ನು ತೋಡಿಕೊಂಡರು.

ತಾಂಡಾದಲ್ಲಿ ಮೂರು ಕುಡಿಯುವ ನೀರಿನ ಬೊರವೆಲ್ ಸಂಪರ್ಕ ಸ್ಥಳಗಳಿದ್ದರೂ ಒಂದರಲ್ಲೂ ಮೋಟಾರ್ ಇಲ್ಲದಿರುವುದರಿಂದ ನೀರು ಬರುತ್ತಿಲ್ಲ. ಇದರಿಂದ ಸುಡು ಬಿಸಿಲಿನಲ್ಲಿ ಜನರಿಗೆ ಮತ್ತು ಜಾನುವಾರುಗಳಿಗೆ ಕುಡಿಯುವ ನೀರು ಸಿಗದೇ ದಿನನಿತ್ಯ ಹೈರಾಣಾಗುತ್ತಿದ್ದಾರೆ.

"ಎಂಟು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾದರೂ ಅಧಿಕಾರಿಗಳು ಸಮಸ್ಯೆ ಬಗೆಹರಿಸಿಲ್ಲ, ದಿನ ಬೆಳಗಾದರೆ 3ಕಿ.ಮೀ ದೂರದಿಂದ ಕುಡಿಯುವ ನೀರು ಹೊತ್ತು ಪರಿಸ್ಥಿತಿ ನಿರ್ಮಾಣವಾಗಿದೆ. ನೀರಿನ ಸಮಸ್ಯೆ ಬಗೆಹರಿಸದಿದ್ದರೆ ಗ್ರಾಪಂ ಬೀಗ ಜಡಿಯಲಾಗುವುದು" ಎಂದು ಲಕ್ಷ್ಮೀ ಸಂತೋಷ ರಾಠೋಡ ಅವರು ಹೇಳಿದ್ದಾರೆ.  

ಸುಂಠಾಣ ಬಡಾ ತಾಂಡದ ಕುಡಿಯುವ ನೀರಿನ ಸಮಸ್ಯೆ ಗಮನಕ್ಕೆ ಬಂದಿದ್ದು ಶೀಘ್ರವೇ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲಾಗುವುದು ಎಂದು ಕಾಳಗಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಡಾ. ಬಸಲಿಂಗಪ್ಪ ಡಿಗ್ಗಿ ಹೇಳಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor