ಕಾಳಗಿ | ಪ್ರಾಚಿನ ಶೈಲಿಯಲ್ಲಿ ಸೂರ್ಯನಾರಾಯಣ ದೇಗುಲ ಜೀರ್ಣೋದ್ಧಾರ
ಕಾಳಗಿ: ಐತಿಹಾಸಿಕ ಬೇಲೂರು ಹಾಗೂ ಹಳೆಬೀಡು ದೇವಸ್ಥಾನಗಳ ಶಿಲ್ಪಕಲೆಗೆ ಸಮಾನವಾದ ಕಾಳಗಿಯ ಪುರಾತನ ಸೂರ್ಯನಾರಾಯಣ ದೇವಾಲಯವನ್ನು ಮೂಲ ಶಿಲ್ಪಕಲೆ ಮಾದರಿಯಲ್ಲೇ ಮರುನಿರ್ಮಿಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ ಹೇಳಿದರು.
ಪಟ್ಟಣದ ನೀಲಕಂಠ ಕಾಳೇಶ್ವರ ದೇವಸ್ಥಾನ ಆವರಣದಲ್ಲಿ ಸೋಮವಾರ ನಡೆಯುತ್ತಿರುವ ದೇವಾಲಯ ಜೀರ್ಣೋದ್ಧಾರ ಕಾಮಗಾರಿಯನ್ನು ಅವರು ವೀಕ್ಷಿಸಿ ಮಾತನಾಡಿದರು. ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿಯಾದ ಕಾಳಗಿ ಜನರ ಬಹುಕಾಲದ ಬೇಡಿಕೆ ಈಗ ಈಡೇರಿಕೆಯಾಗುತ್ತಿರುವುದು ಸಂತಸದ ವಿಷಯವಾಗಿದೆ ಎಂದು ಹೇಳಿದರು.
ಕ್ರಿ.ಶ. 1000ರಲ್ಲಿ ಚಾಲುಕ್ಯರ ರಾಜಧಾನಿಯಾಗಿದ್ದ ಕಾಳಗಿ ಪ್ರದೇಶದಲ್ಲಿ ಇದುವರೆಗೆ 11 ಶಾಸನಗಳು ಪತ್ತೆಯಾಗಿದ್ದು, ಇದರ ಐತಿಹಾಸಿಕ ಮಹತ್ವ ಹೆಚ್ಚಾಗಿದೆ ಎಂದು ಅವರು ತಿಳಿಸಿದರು.
ಸುಮಾರು 13ನೇ ಶತಮಾನದ ಈ ಸೂರ್ಯನಾರಾಯಣ ದೇವಾಲಯ ಅವನತಿ ಹಂತಕ್ಕೆ ತಲುಪಿದ್ದರೂ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ವಿಶೇಷ ಆಸಕ್ತಿಯಿಂದ ಜೀರ್ಣೋದ್ಧಾರ ಕಾರ್ಯ ಪ್ರಗತಿಯಲ್ಲಿದೆ ಎಂದು ಅವರು ಹೇಳಿದರು. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ 2024–25ನೇ ಸಾಲಿನ ಮ್ಯಾಕ್ರೋ ಕ್ರಿಯಾಯೋಜನೆಯಡಿ 4.17 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಕಾಮಗಾರಿ ನಡೆಸುತ್ತಿದೆ ಎಂದು ತಿಳಿಸಿದರು.
ಪುರಾತತ್ವ ಇಲಾಖೆ ಸಹಾಯಕ ನಿರ್ದೇಶಕ ಡಾ. ರಾಜಾರಾಮ ಬಿ.ಸಿ. ಮಾತನಾಡಿ, ಇದು ಐತಿಹಾಸಿಕ ಮಹತ್ವದ ಪುನರ್ ನಿರ್ಮಾಣ ಕಾರ್ಯವಾಗಿದ್ದು, ಸ್ಥಳೀಯರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ದೇವಾಲಯದ ಸುತ್ತಮುತ್ತ ಸುಂದರ ಉದ್ಯಾನವನ ನಿರ್ಮಿಸಲಾಗುವುದು ಹಾಗೂ ಪಕ್ಕದ ರಸ್ತೆ ತೆರವುಗೊಳಿಸಲಾಗುವುದು ಎಂದು ಅವರು ತಿಳಿಸಿದರು. ಒಂದು ವರ್ಷದೊಳಗೆ ದೇವಾಲಯವನ್ನು ಸುಂದರವಾಗಿ ಮರುನಿರ್ಮಿಸಿ ಸಾರ್ವಜನಿಕರಿಗೆ ಸಮರ್ಪಿಸಲಾಗುವುದು ಎಂದು ಹೇಳಿದರು.
ಮಾಜಿ ಸಚಿವೆ ಹಾಗೂ ಚಲನಚಿತ್ರ ನಟಿ ಉಮಾಶ್ರೀ, ಮಾಜಿ ಶಾಸಕ ವಿಶ್ವನಾಥ ಪಾಟೀಲ ಹೆಬ್ಬಾಳ, ಮಾಜಿ ಜಿಪಂ ಸದಸ್ಯ ರಾಜೇಶ ಜಗದೇವ ಗುತ್ತೇದಾರ, ತಹಶಿಲ್ದಾರ ಪೃಥ್ವಿರಾಜ್ ಪಾಟೀಲ, ದೇವಸ್ಥಾನ ಸಮಿತಿ ಅಧ್ಯಕ್ಷ ಶಿವಶರಣಪ್ಪ ಕಮಲಾಪೂರ, ರಾಘವೇಂದ್ರ ಗುತ್ತೇದಾರ, ಬಸಯ್ಯಸ್ವಾಮಿ ಪ್ಯಾಟಿಮಠ, ಸಂತೋಷ ಪತಂಗೆ, ಶರಣಪ್ಪ ಬೆಲೂರ, ವೇದಪ್ರಕಾಶ ಮೊಟಗಿ, ಭೀಮರಾಯ ಮಲಘಾಣ, ದತ್ತು ಗುತ್ತೇದಾರ, ಸಂತೋಷ ನರನಾಳ, ಬಾಬು ನಾಟೀಕಾರ, ಸಂತೋಷ ಕಡಬೂರ, ಸಂಗಮೇಶ ಬಡಿಗೇರ, ವೀರಯ್ಯಸ್ವಾಮಿ ಮಠಪತ್ತಿ ಸೇರಿದಂತೆ ಅನೇಕರು ಇದ್ದರು.