ಕಂದಾಯ ಸೇವೆಯಲ್ಲಿ ಕರ್ನಾಟಕ ದೇಶದಲ್ಲೇ ನಂಬರ್ 1 : ಸಚಿವ ಪ್ರಿಯಾಂಕ್ ಖರ್ಗೆ
ಕಂದಾಯ ಸೌಲಭ್ಯ ವಿತರಣಾ ಅಭಿಯಾನಕ್ಕೆ ಚಾಲನೆ
ಕಲಬುರಗಿ : ಕಂದಾಯ ಸೇವೆಗಳನ್ನು ಪಡೆಯಲು ಜನರು ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸುವ ಉದ್ದೇಶದಿಂದ ಸರ್ಕಾರ ಅನೇಕ ಸೇವೆಗಳನ್ನು ಡಿಜಿಟಲ್ ಮಾದರಿಯಲ್ಲಿ ಮನೆಬಾಗಿಲಿಗೆ ತಲುಪಿಸಿದೆ. ಕಂದಾಯ ಹಾಗೂ ಪಂಚಾಯತ್ ರಾಜ್ ಸೇವೆ ನೀಡುವಲ್ಲಿ ಕರ್ನಾಟಕ ದೇಶದಲ್ಲೇ ನಂಬರ್-1 ಸ್ಥಾನದಲ್ಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ನಗರದ ಡಾ. ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಶನಿವಾರ ನಡೆದ ಕಂದಾಯ ಇಲಾಖೆಯ ಹಕ್ಕುಪತ್ರ, ಪಹಣಿ, ಪಿಂಚಣಿ ಸೇರಿದಂತೆ ವಿವಿಧ ಸೌಲಭ್ಯ ವಿತರಣಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
“ನಮ್ಮ ಸರ್ಕಾರ ಈಗಾಗಲೇ ಐದು ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸಿದೆ. ಜನಸಾಮಾನ್ಯರಿಗೆ ಅವರ ಆಸ್ತಿಯ ಕಾನೂನಾತ್ಮಕ ಹಕ್ಕು ದಾಖಲೆಗಳನ್ನು ಒದಗಿಸುವ ‘ಭೂ ಗ್ಯಾರಂಟಿ’ ನಮ್ಮ ಸರ್ಕಾರದ ಆರನೇ ಗ್ಯಾರಂಟಿಯಂತಿದೆ” ಎಂದು ಹೇಳಿದರು.
ಇಂದು ವಿತರಿಸಲಾದ ಹಕ್ಕುಪತ್ರಗಳು, ದರಖಾಸ್ತು ಪೋಡಿ ಮತ್ತು ಇ-ಫೌತಿ ದಾಖಲೆಗಳು ಕೇವಲ ಕಾಗದಗಳಲ್ಲ; ಬಡವರ ಸ್ವಾಭಿಮಾನ ಮತ್ತು ಆರ್ಥಿಕ ಭದ್ರತೆಯ ಅಡಿಪಾಯವಾಗಿವೆ. ಭೂ ಹಕ್ಕು ಸಿಕ್ಕಾಗ ಮಾತ್ರ ವ್ಯಕ್ತಿಗೆ ಗೌರವಯುತ ಬದುಕು ಸಾಧ್ಯ. ಈ ದಾಖಲೆಗಳ ಮೂಲಕ ರೈತರು ಬ್ಯಾಂಕ್ ಸಾಲ, ಬೆಳೆ ವಿಮೆ ಹಾಗೂ ಸರ್ಕಾರಿ ಸಬ್ಸಿಡಿ ಪಡೆಯಲು ಅನುಕೂಲವಾಗಲಿದೆ ಎಂದು ತಿಳಿಸಿದರು.
ಕಳೆದ ಮೂರು ವರ್ಷಗಳಲ್ಲಿ ಜಿಲ್ಲೆಯ 1,14,337 ಫಲಾನುಭವಿಗಳಿಗೆ ಏಕಕಾಲದಲ್ಲಿ ಸೌಲಭ್ಯ ವಿತರಿಸಿರುವುದು ಕಂದಾಯ ಇಲಾಖೆಯ ದೊಡ್ಡ ಸಾಧನೆ ಎಂದು ಸಚಿವರು ಶ್ಲಾಘಿಸಿದರು. ಬಿ. ಫೌಝಿಯಾ ತರನ್ನಮ್ ನೇತೃತ್ವದ ತಂಡದ ಕಾರ್ಯವನ್ನು ಅವರು ಮೆಚ್ಚಿದರು.
40 ವರ್ಷಗಳಿಂದ ಬಾಕಿ ಉಳಿದಿದ್ದ ದರಖಾಸ್ತು ಪೋಡಿ ಪ್ರಕರಣಗಳಿಗೆ ಪರಿಹಾರ ನೀಡಲಾಗಿದೆ. 94ಸಿ ಹಾಗೂ 94 ಸಿಸಿ ಅಡಿಯಲ್ಲಿ ಮನೆ ಹಕ್ಕುಪತ್ರ ವಿತರಿಸಲಾಗಿದೆ. ಆಸ್ತಿ ಕಬಳಿಕೆ ತಡೆಯಲು ಪಹಣಿಗೆ ಆಧಾರ್ ಜೋಡಣೆ ಮಾಡಲಾಗಿದೆ ಎಂದರು.
ಕಳೆದ ಮೂರು ವರ್ಷಗಳಲ್ಲಿ ಅತಿವೃಷ್ಠಿ ಪರಿಹಾರವಾಗಿ ಜಿಲ್ಲೆಗೆ 2,590 ಕೋಟಿ ರೂ. ನೀಡಲಾಗಿದೆ. ಬೆಳೆ ವಿಮೆ ಪರಿಹಾರ ವಿತರಣೆಯಲ್ಲಿ ಕಲಬುರಗಿ ಜಿಲ್ಲೆ ರಾಷ್ಟ್ರದಲ್ಲೇ ಎರಡನೇ ಸ್ಥಾನದಲ್ಲಿದೆ ಎಂದು ಸಚಿವರು ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಅಲ್ಲಮಪ್ರಭು ಪಾಟೀಲ್ ಮಾತನಾಡಿ, ಜಿಲ್ಲೆಯಲ್ಲಿ ಮೂರು ವರ್ಷಗಳಲ್ಲಿ ದಾಖಲೆ ಪ್ರಮಾಣದಲ್ಲಿ 6,060 ಹಕ್ಕುಪತ್ರ ವಿತರಿಸಲಾಗಿದೆ. ಇದು ರಾಜ್ಯದ ಇತಿಹಾಸದಲ್ಲೇ ದೊಡ್ಡ ಸಾಧನೆಯಾಗಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಬಿ. ಫೌಝಿಯಾ ತರನ್ನುಮ್ ಪ್ರಸ್ತಾವಿಕವಾಗಿ ಮಾತನಾಡಿ, ಕಳೆದ ಮೂರು ವರ್ಷಗಳಲ್ಲಿ 330 ಕಂದಾಯ ಗ್ರಾಮಗಳನ್ನು ಘೋಷಿಸಲಾಗಿದೆ. 23,447 ಪಹಣಿ ತಿದ್ದುಪಡಿ, 33,940 ಇ-ಫೌತಿ ಅರ್ಜಿಗಳ ವಿಲೇವಾರಿ ಹಾಗೂ 453 ಗ್ರಾಮಗಳಲ್ಲಿ ಪೋಡಿ ಮುಕ್ತ ಅಳತೆ ಕಾರ್ಯ ಪೂರ್ಣಗೊಂಡಿದೆ ಎಂದು ಮಾಹಿತಿ ನೀಡಿದರು.
ಭೂ-ಸುರಕ್ಷಾ ಯೋಜನೆಯಡಿ ಜಿಲ್ಲೆಯ 11 ತಾಲೂಕುಗಳಲ್ಲಿ 1.41 ಕೋಟಿ ಪುಟಗಳ ದಾಖಲೆಗಳನ್ನು ಡಿಜಿಟಲೀಕರಣ ಮಾಡಲಾಗಿದೆ. ಪಹಣಿಗೆ ಆಧಾರ್ ಸೀಡಿಂಗ್ ಶೇ.85ರಷ್ಟು ಪೂರ್ಣಗೊಂಡಿದೆ. ಸಾಮಾಜಿಕ ಭದ್ರತಾ ಯೋಜನೆಗಳಡಿ 3.13 ಲಕ್ಷಕ್ಕೂ ಅಧಿಕ ಫಲಾನುಭವಿಗಳಿಗೆ ಡಿಬಿಟಿ ಮೂಲಕ ನೇರ ಪಿಂಚಣಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ತಹಶೀಲ್ದಾರರಿಗೆ ಪ್ರಶಂಸಾ ಪತ್ರ ವಿತರಣೆ :
ಕಳೆದ ಮೂರು ವರ್ಷದ ಅವಧಿಯಲ್ಲಿ ಕಂದಾಯ ಗ್ರಾಮ ಘೋಷಣೆಯಲ್ಲಿ ಗಮನಾರ್ಹ ಸಾಧನೆ ಮಾಡಿದ ಅಫಜಲಪುರ ತಹಶೀಲ್ದಾರ್ ಸಂಜೀವಕುಮಾರ ದಾಸರ್, ಕಲಬುರಗಿ ತಹಶೀಲ್ದಾರ್ ಕೆ. ಆನಂದಶೀಲ, ಭೂ ಸುರಕ್ಷಾ ಯೋಜನೆಯಡಿ ಉತ್ತಮ ಕಾರ್ಯನಿರ್ವಹಿಸಿದ ಚಿಂಚೋಳಿ ತಹಶೀಲ್ದಾರ ಸುಬ್ಬಣ್ಣ ಜಮಖಂಡಿ ಮತ್ತು ಶಹಾಬಾದ ತಹಶೀಲ್ದಾರ ನೀಲಪ್ರಭಾ, ಲ್ಯಾಂಡ್ ಬೀಟ್ ಮೂಲಕ ಸರ್ಕಾರಿ ಜಮೀನು ಸಮರಕ್ಷಣೆಯಲಿ ಮಹತ್ತರ ಪಾತ್ರ ವಹಿಸಿರುವ ಚಿತ್ತಾಪುರ ತಹಶೀಲ್ದಾರ ನಾಗಯ್ಯ ಹಿರೇಮಠ, ಜೇವರ್ಗಿ ತಹಶೀಲ್ದಾರ ಮಲ್ಲಣ್ಣ, ಆಳಂದ ತಹಶೀಲ್ದಾರ ಅಣ್ಣಾರಾವ ಪಾಟೀಲ, ಇ-ಪೌತಿಯಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದ ಕಮಲಾಪುರ ತಹಶೀಲ್ದಾರ ಮೊಹಮ್ಮದ್ ಮೋಹಸೀನ್, ಸೇಡಂ ತಹಶೀಲ್ದಾರ ಶ್ರೇಯಾಂಕಾ ಧನಶ್ರೀ, ಪಹಣಿ ಜೋಡಣೆಯಲ್ಲಿ ಉತ್ತಮ ಪ್ರಗತಿ ದಾಖಲಿಸಿದ ಯಡ್ರಾಮಿ ತಹಶೀಲ್ದಾರ ಯಲ್ಲಪ್ಪ ಸುಬೇದಾರ, ಕಾಳಗಿ ತಹಶೀಲ್ದಾರ ಪೃಥ್ವಿರಾಜ ಪಾಟೀಲ ಅವರನ್ನು ಸಚಿವ ಪ್ರಿಯಾಂಕ ಖರ್ಗೆ ಅವರು ಪ್ರಶಂಸನಾ ಪತ್ರ ನೀಡಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕ ಜಗದೇವ ಗುತ್ತೇದಾರ, ತಿಪ್ಪಣ್ಣಪ್ಪ ಕಮಕನೂರ, ಜೆಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ ಹರವಾಳ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಕಲಬುರಗಿ ಕಾಡಾ ಅಧ್ಯಕ್ಷ ಡಾ.ಎಂ.ಎ.ರಶೀದ್, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಚಂದ್ರಿಕಾ ಪರಮೇಶ್ವರ, ಮಹಾನಗರ ಪಾಲಿಕೆಯ ಮಹಾಪೌರರಾದ ವರ್ಷಾ ರಾಜೀವ ಜಾನೆ, ಪ್ರಾದೇಶಿಕ ಆಯುಕ್ತೆ ಜಹೀರಾ ನಸೀಮ್, ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು, ಡಿ.ಸಿ.ಪಿ. ಶಾಲು, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಸಹಾಯಕ ಆಯುಕ್ತರಾದ ಸಾಹಿತ್ಯ ಆಲದಕಟ್ಟಿ, ಪ್ರಭುರೆಡ್ಡಿ ಸೇರಿದಂತೆ ನೂರಾರು ಸಂಖ್ಯೆಯಲಿ ಕಂದಾಯ ಇಲಾಖೆಯ ಅಧಿಕಾರಿ-ಸಿಬ್ಬಂದಿಗಳು ಕಂದಾಯ ಪರ್ವದಲ್ಲಿ ಭಾಗಿಯಾಗಿದ್ದರು. ಅಪರ ಜಿಲ್ಲಾಧಿಕಾರಿ ರಾಯಫ್ಪ ಹುಣಸಗಿ ಸ್ವಾಗತಿಸಿದರು.