Kalaburagi | ಸಿಡಿಲು ಬಡಿದು 18 ಕುರಿಗಳು ಸಾವು
ಕಲಬುರಗಿ: ಮಂಗಳವಾರ ಸಂಜೆ ಸುರಿದ ಭಾರೀ ಗಾಳಿ ಮಳೆಯ ನಡುವೆ ಸಿಡಿಲು ಬಡಿದು 18 ಕುರಿಗಳು ಸಾವನ್ನಪ್ಪಿದ ಘಟನೆ ಕಾಳಗಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ನಡೆದಿದೆ.
ಹೆಬ್ಬಾಳ ಗ್ರಾಮದ ಕುರಿಗಾಹಿಗಳಾದ ಜಗಪ್ಪ, ಮಲ್ಲಪ್ಪ ಹಾಗೂ ದಶರಥ ಎಂಬವರು ತಮ್ಮ ಕುರಿಗಳನ್ನು ಮೇಯಿಸಲು ಗ್ರಾಮದ ಹೊರವಲಯಕ್ಕೆ ಕರೆದೊಯ್ದಿದ್ದರು. ಸಂಜೆ ಸುಮಾರು 5.30ರ ವೇಳೆಗೆ ಏಕಾಏಕಿ ಗಾಳಿ ಸಹಿತ ಮಳೆ ಆರಂಭವಾಗಿದ್ದು, ಈ ವೇಳೆ ಸಿಡಿಲು ಬಡಿದು 18 ಕುರಿಗಳು ಸಾವನ್ನಪ್ಪಿವೆ.
ಘಟನೆಯಲ್ಲಿ ಸುಮಾರು 250ಕ್ಕೂ ಹೆಚ್ಚು ಕುರಿಗಳು ಅದೃಷ್ಟವಶಾತ್ ಪಾರಾಗಿವೆ. ಸಿಡಿಲಿನ ಪರಿಣಾಮ ಕುರಿಗಾಹಿಗಳಿಗೆ ಲಕ್ಷಾಂತರ ರೂಪಾಯಿ ಮೌಲ್ಯದ ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ.
ಸುದ್ದಿ ತಿಳಿದು ಮಾಡಬೂಳ್ ಪೊಲೀಸ್ ಠಾಣೆಯ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ನಷ್ಟಕ್ಕೊಳಗಾದ ಕುರಿಗಾಹಿಗಳಿಗೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.