Kalaburagi | ಆರೋಗ್ಯ ಜಾಗೃತಿಗಾಗಿ ಆ.16ರಂದು ಮ್ಯಾರಥಾನ್ ಓಟ: ಅರುಣಕುಮಾರ್ ಪಾಟೀಲ್
ಕಲಬುರಗಿ: ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ‘ರನ್ ಫಾರ್ ಯುನಿಟಿ, ರನ್ ಫಾರ್ ಹೆಲ್ತ್’ ಎಂಬ ಘೋಷವಾಕ್ಯದೊಂದಿಗೆ ಕಲಬುರಗಿ ರನ್ನರ್ಸ್ ಕ್ಲಬ್ ವತಿಯಿಂದ ಆಗಸ್ಟ್ 16ರಂದು ನಗರದಲ್ಲಿ ಮ್ಯಾರಥಾನ್ ಹಾಗೂ ಜಾಗಿಂಗ್-ವಾಕಿಂಗ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕೆಕೆಆರ್ ಟಿಸಿ ಅಧ್ಯಕ್ಷ ಅರುಣಕುಮಾರ್ ಪಾಟೀಲ್ ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 6:30ಕ್ಕೆ ಮಿನಿ ವಿಧಾನಸೌಧದಿಂದ ಮ್ಯಾರಥಾನ್ ಗೆ ಚಾಲನೆ ನೀಡಲಾಗುವುದು. ಜಾಗಿಂಗ್ ಮತ್ತು ವಾಕಿಂಗ್ನಲ್ಲಿ ವಿದ್ಯಾರ್ಥಿಗಳು, ಯುವಕರು ಸೇರಿದಂತೆ ಹಿರಿಯರು, ಕಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಮಿನಿ ವಿಧಾನಸೌಧದಿಂದ ಆರಂಭವಾಗುವ ಓಟ ಜಗತ್ ಸರ್ಕಲ್ ಮೂಲಕ ಸಾಗಿ, ಸರ್ದಾರ್ ವಲ್ಲಭಭಾಯಿ ಪಟೇಲ್ ಮಾರ್ಗವಾಗಿ ಪುನಃ ಜಿಲ್ಲಾಧಿಕಾರಿ ಕಚೇರಿಗೆ ತಲುಪಲಿದೆ. ಈ ಕಾರ್ಯಕ್ರಮದಲ್ಲಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಳ್ಳುವಂತೆ ಈಗಾಗಲೇ ಮಾಹಿತಿ ನೀಡಲಾಗಿದೆ ಎಂದು ಹೇಳಿದರು.
ಆರೋಗ್ಯಕರ ಜೀವನಶೈಲಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. ಇಂದಿನ ಬದಲಾಗುತ್ತಿರುವ ಜೀವನಶೈಲಿಯಿಂದ ಆರೋಗ್ಯದ ಮೇಲೆ ಉಂಟಾಗುತ್ತಿರುವ ಪರಿಣಾಮಗಳ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಸಹಕಾರಿಯಾಗಲಿದೆ. ಭಾಗವಹಿಸುವವರಿಗೆ ಸುಮಾರು 300 ಟೀ-ಶರ್ಟ್ಗಳನ್ನು ವಿತರಿಸಲಾಗುವುದು ಎಂದು ಅರುಣಕುಮಾರ್ ಪಾಟೀಲ್ ಹೇಳಿದರು.
ಕಾರ್ಯಕ್ರಮಕ್ಕೆ ಅಲ್ಲಮಪ್ರಭು ಪಾಟೀಲ್, ಖನಿಜ ಫಾತಿಮಾ, ಬಸವರಾಜ ಮತ್ತಿಮಡು ಸೇರಿದಂತೆ ಹಲವು ಗಣ್ಯರು ಚಾಲನೆ ನೀಡಲಿದ್ದಾರೆ.
ಕಲಬುರಗಿ ರನ್ನರ್ಸ್ ಕ್ಲಬ್ನ ರಾಜು ಕಾಂತಾ ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ‘ರನ್ ಫಾರ್ ಯುನಿಟಿ, ರನ್ ಫಾರ್ ಹೆಲ್ತ್’ಘೋಷವಾಕ್ಯದೊಂದಿಗೆ ಮ್ಯಾರಥಾನ್ ಆಯೋಜಿಸಲಾಗಿದೆ. ಆರೋಗ್ಯದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಹಾಗೂ ಯುವಜನರನ್ನು ಆರೋಗ್ಯಕರ ಜೀವನಶೈಲಿಯತ್ತ ಪ್ರೇರೇಪಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ನಿತಿನ್ ಜವಳಿ, ಡಾ.ವೇಣುಗೋಪಾಲ್ ಮಂತ್ರಿ, ಕಿರಣ್ ದೇಶಮುಖ್, ಅಮೀನ್ ಬಾಗೇವಾಡಿ, ಡಾ. ಶರಣು ಮಹಾಗಾಂವಕರ್ ಮತ್ತಿತ್ತರರು ಇದ್ದರು.