ನಾಲ್ಕೂ ವಿಧಾನ ಪರಿಷತ್ ಕ್ಷೇತ್ರಗಳಲ್ಲಿ ಎನ್ಡಿಎ ಅಭ್ಯರ್ಥಿಗಳ ಗೆಲುವು ಖಚಿತ: ಎನ್.ರವಿಕುಮಾರ್
ಕಲಬುರಗಿ : ಅ.23ರಂದು ರಾಜ್ಯದ ನಾಲ್ಕು ವಿಧಾನ ಪರಿಷತ್ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಅ. 27ರಂದು ಫಲಿತಾಂಶ ಪ್ರಕಟವಾಗಲಿದೆ. ಈ ನಾಲ್ಕೂ ಕ್ಷೇತ್ರಗಳಲ್ಲಿ ಎನ್ಡಿಎ ಮೈತ್ರಿಕೂಟದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ಪದವೀಧರ ಹಾಗೂ ಎರಡು ಶಿಕ್ಷಕರ ಕ್ಷೇತ್ರಗಳಲ್ಲಿ ಎನ್ಡಿಎ ಮೈತ್ರಿಕೂಟದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ನಾಲ್ಕು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿರುವ ಶಶೀಲ್ ನಮೋಶಿ ಅವರು ಐದನೇ ಬಾರಿಗೆ ಸ್ಪರ್ಧಿಸಿದ್ದು, ಈ ಬಾರಿಯೂ ಭರ್ಜರಿ ಗೆಲುವು ಸಾಧಿಸಲಿದ್ದಾರೆ ಎಂದರು.
ರಾಜ್ಯದ 41 ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಂಡು ಶಿಕ್ಷಕರ ಅಭಿಪ್ರಾಯ ಸಂಗ್ರಹಿಸಿದ್ದೇವೆ. ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಶೇ.80ರಷ್ಟು ಶಿಕ್ಷಕರು ಶಶೀಲ್ ನಮೋಶಿ ಅವರ ಪರವಾಗಿರುವುದು ಕಂಡುಬಂದಿದೆ. ರಾಜ್ಯ ಸರ್ಕಾರ ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಶಿಕ್ಷಕರು, ರೈತರು ಹಾಗೂ ಆರೋಗ್ಯ ಕ್ಷೇತ್ರದ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ರಾಜ್ಯದಲ್ಲಿ ಒಟ್ಟು 2.84 ಲಕ್ಷ ಹುದ್ದೆಗಳು ಖಾಲಿಯಿದ್ದು, ಶಿಕ್ಷಣ ಕ್ಷೇತ್ರದಲ್ಲಿಯೇ 79,694 ಹುದ್ದೆಗಳು ಖಾಲಿ ಇವೆ. ಉನ್ನತ ಶಿಕ್ಷಣ ಇಲಾಖೆಯಲ್ಲಿ 13,599 ಹುದ್ದೆಗಳು ಭರ್ತಿಯಾಗದೆ ಉಳಿದಿವೆ. ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಬೋಧಕ ಹುದ್ದೆಗಳು ಖಾಲಿಯಿರುವುದರಿಂದ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ. ಕುಲಪತಿಗಳು ಮತ್ತು ಕುಲಸಚಿವರನ್ನು ಹೊರತುಪಡಿಸಿದರೆ, ಹಲವು ಕಡೆಗಳಲ್ಲಿ ಅತಿಥಿ ಉಪನ್ಯಾಸಕರನ್ನೇ ಅವಲಂಬಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.
ಕಲ್ಯಾಣ ಕರ್ನಾಟಕ ಭಾಗದ ಜನರನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಕಡೆಗಣಿಸಿದೆ. ಶಿಕ್ಷಣ ಕ್ಷೇತ್ರಕ್ಕೆ ಮೊದಲ ಆದ್ಯತೆ ನೀಡಬೇಕಿದ್ದ ಸರ್ಕಾರ, ಈ ಭಾಗದ ಅಭಿವೃದ್ಧಿಯ ಬಗ್ಗೆ ನಿರ್ಲಕ್ಷ್ಯ ವಹಿಸಿದೆ. ಶೇ.40ರಷ್ಟು ಶಾಲೆಗಳಲ್ಲಿ ಶೌಚಾಲಯ ಸೇರಿದಂತೆ ಮೂಲಸೌಕರ್ಯಗಳ ಕೊರತೆಯಿದೆ. ಶಶೀಲ್ ನಮೋಶಿ ಅವರು ವಿವಿಧ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಪರಿಶೀಲಿಸಿದ್ದಾರೆ ಎಂದು ತಿಳಿಸಿದರು.
ಮಹಿಳೆಯರನ್ನು ಕಡೆಗಣಿಸಿರುವ ರಾಜ್ಯ ಸರ್ಕಾರವು ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಸ್ಥಾನ ನೀಡಿಲ್ಲ. ಮಹಿಳಾ ಶಿಕ್ಷಕಿಯರು ಇದೀಗ ಬಿಜೆಪಿಯ ಪರವಾಗಿದ್ದಾರೆ. ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಜಾರಿಗೆ ತರುವುದಾಗಿ ಭರವಸೆ ನೀಡಿದ್ದ ಸರ್ಕಾರ ಅದನ್ನು ಈಡೇರಿಸಿಲ್ಲ. ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಹೇಳುತ್ತಿದೆಯೇ ಹೊರತು, ನೇಮಕಾತಿ ಪ್ರಕ್ರಿಯೆ ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಟೀಕಿಸಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ ಮೀಸಲಿಟ್ಟ ಎಸ್ಸಿಪಿ ಮತ್ತು ಟಿಎಸ್ಪಿ ಅನುದಾನವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಿದ ಅವರು, ಶೇ. 56ರಷ್ಟು ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರ ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದ ಮಂಡಿಸುವಲ್ಲಿ ವಿಫಲವಾಗಿದೆ. ಈ ವಿಚಾರ ನ್ಯಾಯಾಲಯದ ವಿಚಾರಣೆಗೆ ಬಂದಾಗ ಸರ್ಕಾರಿ ವಕೀಲರು ರಜೆ ಹಾಕಿದ್ದರು ಎಂದು ದೂರಿದರು.
ಜಾತಿ ಜನಗಣತಿ ನಡೆಸಿದ್ದರೂ ಅದರ ವರದಿಯನ್ನು ಜಾರಿಗೊಳಿಸಿಲ್ಲ. ಹಿಂದುಳಿದ ವರ್ಗಗಳ ಮಕ್ಕಳ ವಿದ್ಯಾರ್ಥಿವೇತನವನ್ನು ಸ್ಥಗಿತಗೊಳಿಸಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ರದ್ದುಪಡಿಸಿ ರಾಜ್ಯ ಶಿಕ್ಷಣ ನೀತಿ (ಎಸ್ಇಪಿ) ಜಾರಿಗೆ ತರುವುದಾಗಿ ಹೇಳಿದ್ದ ಸರ್ಕಾರ ಅದನ್ನೂ ಜಾರಿಗೆ ತಂದಿಲ್ಲ. ಅತಿಥಿ ಶಿಕ್ಷಕರಿಗೆ ಅನ್ಯಾಯವಾಗುತ್ತಿದ್ದು, ಅವರಿಗೆ ಉದ್ಯೋಗ ಭದ್ರತೆಯೂ ಇಲ್ಲವಾಗಿದೆ ಎಂದು ಹೇಳಿದರು.
ಬರಗಾಲದ ಪರಿಸ್ಥಿತಿಯಲ್ಲಿ ರೈತರಿಗೆ ಕೇವಲ 2,500 ರೂ. ನೀಡಲಾಗುತ್ತಿದೆ. ರೈತರಿಗೆ ಅನ್ಯಾಯ ಮಾಡಿರುವ ರಾಜ್ಯ ಸರ್ಕಾರ ಶಿಕ್ಷಣ ಕ್ಷೇತ್ರಕ್ಕೂ ವಂಚನೆ ಮಾಡಿದೆ ಎಂದು ಎನ್. ರವಿಕುಮಾರ್ ವಾಗ್ದಾಳಿ ನಡೆಸಿದರು.
ಎನ್ಡಿಎ ಮೈತ್ರಿಕೂಟದ ಅಭ್ಯರ್ಥಿ ಶಶೀಲ್ ನಮೋಶಿ ಮಾತನಾಡಿ, ರಾಜ್ಯದಲ್ಲಿ 73 ಸಾವಿರ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಯಾವುದೇ ನೇಮಕಾತಿ ಪ್ರಕ್ರಿಯೆ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳನ್ನು ಶೇ. 100ರಷ್ಟು ಭರ್ತಿ ಮಾಡಬೇಕು ಎಂದು ಒತ್ತಾಯಿಸಿದ್ದೇವೆ. ಆದರೆ, ಈವರೆಗೆ ಸರ್ಕಾರ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ. ಇದರಿಂದ ಈ ಭಾಗದ ಶಿಕ್ಷಣ ವ್ಯವಸ್ಥೆ ಹಾಗೂ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಂಸದ ಉಮೇಶ್ ಜಾಧವ್, ಶಾಸಕ ಬಸವರಾಜ ಮತ್ತಿಮಡು, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ, ರಾಜಕುಮಾರ ಪಾಟೀಲ್ ತೆಲಕೂರ, ದೊಡ್ಡಪ್ಪಗೌಡ ಪಾಟೀಲ್, ಕೃಷ್ಣ ರೆಡ್ಡಿ, ಬಾಲರಾಜ್ ಗುತ್ತೇದಾರ್ ಹಾಗೂ ಅಶೋಕ್ ಬಗಲಿ ಉಪಸ್ಥಿತರಿದ್ದರು.