×
Ad

ಪೌರ ಕಾರ್ಮಿಕರು ವಾರದ ರಜೆ ಕಡ್ಡಾಯ ಪಡೆದುಕೊಳ್ಳಿ: ವೆಂಕಟೇಶ್ ಶಿಂದಿಹಟ್ಟಿ

Update: 2026-06-01 23:35 IST

ಕಲಬುರಗಿ: ನೇರ ಪಾವತಿದಾರ ಪೌರಕಾರ್ಮಿಕರು ಪ್ರತಿ ರವಿವಾರ ವೇತನ ಸಹಿತ ರಜೆಗೆ ಅರ್ಹರಾಗಿದ್ದು, ರಜೆಯ ದಿನ ಕೆಲಸಕ್ಕೆ ನಿಯೋಜಿಸಿದರೆ ದ್ವಿಗುಣ ವೇತನ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಕಾರ್ಮಿಕರ ಆಯುಕ್ತ ವೆಂಕಟೇಶ್ ಶಿಂದಿಹಟ್ಟಿ ಹೇಳಿದರು.

ನಗರದ ಕನ್ನಡ ಭವನದಲ್ಲಿ ಸೋಮವಾರ ಕರ್ನಾಟಕ ರಾಜ್ಯ ಮುನಸಿಪಲ್ ನೌಕರರ ಸಂಘ (ರಿ) ಜಿಲ್ಲಾ ಸಮಿತಿ ಕಲಬುರಗಿ ಆಯೋಜಿಸಿದ್ದ ಪೌರಕಾರ್ಮಿಕರ ಹಕ್ಕುಗಳ ಜಾಗೃತಿ ಸಮಾವೇಶವನ್ನು ಉದ್ಘಾಟಿಸಿದ ಅವರು ಪೌರಕಾರ್ಮಿಕರ ಕಾನೂನಾತ್ಮಕ ಹಕ್ಕುಗಳು ಮತ್ತು ಸೌಲಭ್ಯಗಳ ಕುರಿತು ವಿವರಿಸಿದರು.

ಪೌರ ಕಾರ್ಮಿಕರು ವಾರದ ರಜೆಯನ್ನು ಪಡೆದುಕೊಳ್ಳಬೇಕು, ಪ್ರತಿ ರವಿವಾರ ರಜೆ ಕೊಡದಿದ್ದರೆ ಬೇರೆ ವಾರದಂದು ಕಡ್ಡಾಯವಾಗಿ ರಜೆ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಪ್ರತಿ ತಿಂಗಳ ಏಳನೇ ತಾರೀಖಿನೊಳಗೆ ವೇತನ ಪಾವತಿಯಾಗಬೇಕು. ಮೇ 22ರಿಂದ ಪರಿಷ್ಕೃತ ಕನಿಷ್ಠ ವೇತನ ಜಾರಿಯಾಗಿದ್ದು, ಈವರೆಗೆ ಮಾಸಿಕ ₹20 ಸಾವಿರ ವೇತನ ಪಡೆಯುತ್ತಿದ್ದ ಕಾರ್ಮಿಕರು ಇನ್ನು ಮುಂದೆ ಸುಮಾರು ₹24 ಸಾವಿರ ವೇತನ ಪಡೆಯಲಿದ್ದಾರೆ ಎಂದು ಹೇಳಿದರು.

ಪೌರಕಾರ್ಮಿಕರಿಗೆ ವಾರ್ಷಿಕ 8.33 ಶೇಕಡಾ ಬೋನಸ್, ಪಿಎಫ್ ಹಾಗೂ ಇಎಸ್‌ಐ ಸೌಲಭ್ಯಗಳನ್ನು ಕಡ್ಡಾಯವಾಗಿ ಒದಗಿಸಬೇಕು. ಸುರಕ್ಷತಾ ಸಾಮಗ್ರಿಗಳು, ಮಹಿಳಾ ಸಿಬ್ಬಂದಿಗೆ ಪೋಶ್ ಸಮಿತಿಗಳು ಹಾಗೂ ಕಾರ್ಮಿಕರ ಹಕ್ಕುಗಳ ರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಹೇಳಿದರು. ಯಾವುದೇ ರೀತಿಯ ಅನ್ಯಾಯ ಕಂಡುಬಂದಲ್ಲಿ ಕಾರ್ಮಿಕ ಇಲಾಖೆಯನ್ನು ಸಂಪರ್ಕಿಸುವಂತೆ ಕರೆ ನೀಡಿದರು.

ಸಂಘಟನೆಯ ಗೌರವಾಧ್ಯಕ್ಷೆ, ಹೋರಾಟಗಾರ್ತಿ ಕೆ.ನೀಲಾ ಪ್ರಾಸ್ತಾವಿಕವಾಗಿ ಮಾತನಾಡಿ, ಪೌರಕಾರ್ಮಿಕರಿಗೆ ಕಾನೂನಿನಡಿ ದೊರೆಯಬೇಕಾದ ಎಲ್ಲ ಸೌಲಭ್ಯಗಳನ್ನು ಯಾವುದೇ ವಿಳಂಬವಿಲ್ಲದೆ ಒದಗಿಸಬೇಕು ಹಾಗೂ ಅವರ ಉದ್ಯೋಗ ಭದ್ರತೆ, ಆರೋಗ್ಯ ಮತ್ತು ಸಾಮಾಜಿಕ ಭದ್ರತೆಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

ಪೌರಕಾರ್ಮಿಕರ ಆರೋಗ್ಯ, ಉದ್ಯೋಗ ಖಾಯಂ ಮತ್ತು ವಿವಿಧ ಸೌಲಭ್ಯಗಳ ವಿಚಾರದಲ್ಲಿ ಮಹಾನಗರ ಪಾಲಿಕೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದ ಅವರು, ಎಲ್ಲ ಪೌರಕಾರ್ಮಿಕರ ಸೇವೆಯನ್ನು ಖಾಯಂಗೊಳಿಸಬೇಕು ಎಂದು ಒತ್ತಡ ಹೇರಿದರು.

ಮೇ 1 ಕಾರ್ಮಿಕ ದಿನಾಚರಣೆಯನ್ನು ಈ ವರ್ಷ ಮೊದಲ ಬಾರಿಗೆ ರಜೆ ದಿನವನ್ನಾಗಿ ಘೋಷಿಸಿರುವುದು ಸ್ವಾಗತಾರ್ಹವಾದರೂ, ವೇತನ ಸಹಿತ ರವಿವಾರ ರಜೆ, ಪರಿಷ್ಕೃತ ಕನಿಷ್ಠ ವೇತನ ಜಾರಿ ಸೇರಿದಂತೆ ಹಲವು ಬೇಡಿಕೆಗಳು ಇನ್ನೂ ಈಡೇರಿಲ್ಲ ಎಂದು ಅವರು ಹೇಳಿದರು.

ಪೌರಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿವೇತನ ಸೌಲಭ್ಯ ಕಲ್ಪಿಸಲು ಮಹಾನಗರ ಪಾಲಿಕೆ ಅಗತ್ಯ ನೆರವು ನೀಡಬೇಕು. ಬೇಸಿಗೆಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಗ್ಲೂಕೋಸ್ ಅಥವಾ ಓಆರ್‌ಎಸ್ ಪ್ಯಾಕೆಟ್ ವಿತರಿಸಬೇಕು. ಬಿಸಿಲಿನ ದಿನಗಳಲ್ಲಿ ಕೆಲಸದ ಅವಧಿ ಕಡಿತಗೊಳಿಸಬೇಕು. ಸುರಕ್ಷತಾ ಪರಿಕರಗಳು, ಮಳೆಗಾಲದ ರೇನ್‌ಕೋಟ್, ಸ್ಟೀಲ್ ನೀರಿನ ಬಾಟಲಿ, ಕಸ ಸಂಗ್ರಹ ಸಾಧನಗಳು, ಮಾಸ್ಕ್, ಸಮವಸ್ತ್ರ, ಚರಂಡಿ ಸ್ವಚ್ಛತಾ ಉಪಕರಣಗಳು ಸೇರಿದಂತೆ ಅಗತ್ಯ ಸಾಮಗ್ರಿಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು.

ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಶಾಂತಾ ಘಂಟಿ ಮಾತನಾಡಿ, ಕನಿಷ್ಠ ವೇತನ ಹೆಚ್ಚಳಕ್ಕಾಗಿ ನಡೆಸಿದ ನಿರಂತರ ಹೋರಾಟದ ಫಲವಾಗಿ ಮಾಸಿಕ ₹4 ಸಾವಿರ ವೇತನ ಹೆಚ್ಚಳ ಸಾಧ್ಯವಾಗಿದೆ. ಪೌರಕಾರ್ಮಿಕರ ಮಾಸಿಕ ವೇತನವನ್ನು ₹36 ಸಾವಿರಕ್ಕೆ ಹೆಚ್ಚಿಸಬೇಕು ಹಾಗೂ ಅವರ ಸೇವೆಯನ್ನು ಖಾಯಂಗೊಳಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಕಾರ್ಮಿಕ ಅಧಿಕಾರಿ ಶರಣಪ್ಪ ಹಳಿಮನಿ ಮಾತನಾಡಿ, ಪೌರಕಾರ್ಮಿಕರ ಶ್ರಮದಿಂದ ನಗರ ಸ್ವಚ್ಛವಾಗಿದ್ದು, ಸಾರ್ವಜನಿಕ ಆರೋಗ್ಯ ಕಾಪಾಡಲ್ಪಡುತ್ತಿದೆ. ಆದ್ದರಿಂದ ಸಮಾಜವು ಅವರ ಹಿತಾಸಕ್ತಿಗೆ ಬೆಂಬಲ ನೀಡಬೇಕು ಎಂದು ಹೇಳಿದರು.

ಕಟ್ಟಡ ಕಾರ್ಮಿಕರ ಸಂಘಟನೆಯ ಜಿಲ್ಲಾ ಅಧ್ಯಕ್ಷ ಶ್ರೀಮಂತ ಬಿರಾದಾರ ಮಾತನಾಡಿ, ಪೌರಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ಸಂಘಟಿತರಾಗಿ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು. ಡಿವೈಎಫ್‌ಐ ರಾಜ್ಯಾಧ್ಯಕ್ಷ ಲವಿತ್ರ ವಸ್ತ್ರದ ಶುಭಾಶಯ ಕೋರಿದರು.

ಸಂಘಟನೆಯ ಅಧ್ಯಕ್ಷೆ ಚಂದಮ್ಮ ಮಾತನಾಡಿ, ಪೌರಕಾರ್ಮಿಕರು ವರ್ಷಗಳ ಕಾಲ ಗುತ್ತಿಗೆ ಪದ್ಧತಿಯಲ್ಲಿ ಸಂಕಷ್ಟ ಅನುಭವಿಸಿದ್ದು, ಇದೀಗ ಅವರ ಸೇವೆಯನ್ನು ಖಾಯಂಗೊಳಿಸಿ ಎಲ್ಲ ಸೌಲಭ್ಯಗಳನ್ನು ಒದಗಿಸುವುದು ಸರ್ಕಾರ ಮತ್ತು ಮಹಾನಗರ ಪಾಲಿಕೆಯ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಶರಣು ಅತನೂರ ಕಾರ್ಯಕ್ರಮ ನಿರ್ವಹಿಸಿ ಸ್ವಾಗತಿಸಿದರು. ಸಂಘಟನೆಯ ಕಾರ್ಯದರ್ಶಿ ಲೋಹಿತ, ಸಹ ಕಾರ್ಯದರ್ಶಿ ಮರೆಪ್ಪ, ಕವಿತಾ, ಶರಣಮ್ಮ, ವೈಶಾಲಿ, ಕಮಲಾಬಾಯಿ ಖಾನಾಪುರ, ಮಲ್ಲಮ್ಮ, ನಾಗಪ್ಪ ರಾಯಚೂರಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News