‘ಮನ್ ಕೀ ಬಾತ್’ ಬಿಟ್ಟು ‘ಜನ ಕೀ ಬಾತ್’ ಮಾತನಾಡಿ: ಮಲ್ಲಿಕಾರ್ಜುನ ಖರ್ಗೆ
► "ದೇಶದಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತವಿದೆ" ► ‘ಧೀಮಂತ ಧುರೀಣ’ ಗ್ರಂಥದ ಕನ್ನಡ ಅನುವಾದ ಕೃತಿ ಲೋಕಾರ್ಪಣೆ
ಕಲಬುರಗಿ: ದೇಶದ ಯುವಕರಿಗೆ ಉದ್ಯೋಗ, ಬಡವರಿಗೆ ಆರ್ಥಿಕ ಭದ್ರತೆ ಹಾಗೂ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಒದಗಿಸುವತ್ತ ಕೇಂದ್ರ ಸರ್ಕಾರ ಗಮನಹರಿಸಬೇಕು. ‘ಮನ್ ಕೀ ಬಾತ್’ ಬಿಟ್ಟು ‘ಜನ ಕೀ ಬಾತ್’ ಮಾತನಾಡಬೇಕು ಎಂದು ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದ ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಸುಮೇಧ ಪ್ರಕಾಶನ ಹೊರತಂದಿರುವ ಖರ್ಗೆ ಅವರ ಕುರಿತಾದ ‘ಧೀಮಂತ ಧುರೀಣ’ ಅಭಿನಂದನಾ ಗ್ರಂಥದ ಕನ್ನಡ ಅನುವಾದ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಅವರು ಮಾತನಾಡಿದರು.
ದೇಶದ ಯುವಕರಿಗೆ ಉದ್ಯೋಗ ಕಲ್ಪಿಸುವುದು, ಬಡವರಿಗೆ ಆರ್ಥಿಕ ಭದ್ರತೆ ಒದಗಿಸುವುದು ಹಾಗೂ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ದೊರೆಯುವಂತೆ ಮಾಡುವುದು ಸರ್ಕಾರದ ಆದ್ಯತೆಯಾಗಬೇಕು ಎಂದು ಖರ್ಗೆ ಒತ್ತಾಯಿಸಿದರು.
ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ಹಲ್ಲೆ ಹಾಗೂ ದೌರ್ಜನ್ಯ ಪ್ರಕರಣಗಳಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪೊಲೀಸ್ ಠಾಣೆಗೆ ತೆರಳಿ ಪ್ರತಿಭಟನೆ ನಡೆಸಬೇಕಾಯಿತು ಎಂದು ಹೇಳಿದರು.
ಬಡವರು ಹಾಗೂ ಉದ್ಯೋಗವಿಲ್ಲದವರು ಯಾವುದೇ ಜಾತಿ ಅಥವಾ ಧರ್ಮಕ್ಕೆ ಸೇರಿದವರಾಗಿದ್ದರೂ ಅವರ ಸಮಸ್ಯೆಗಳು ಒಂದೇ ಆಗಿವೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಲೆ ಏರಿಕೆ ನಿಯಂತ್ರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ದೇಶದಲ್ಲಿ ಇನ್ನೂ ಅಸ್ಪೃಶ್ಯತೆ ಅಸ್ತಿತ್ವದಲ್ಲಿರುವುದು ಆತಂಕಕಾರಿ ಸಂಗತಿ. ಹಿಂದೂತ್ವದ ಬಗ್ಗೆ ಮಾತನಾಡುವವರು ಸಾಮಾಜಿಕ ಅನ್ಯಾಯ ಮತ್ತು ಅಸ್ಪೃಶ್ಯತೆ ನಿರ್ಮೂಲನೆ ಬಗ್ಗೆ ಏಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ಬುಲೆಟ್ ರೈಲು ಯೋಜನೆಗೆ ಖರ್ಗೆ ಆಕ್ಷೇಪ :
ಮುಂಬೈ–ಅಹಮದಾಬಾದ್ ಬುಲೆಟ್ ರೈಲು ಯೋಜನೆಯನ್ನೂ ಖರ್ಗೆ ಟೀಕಿಸಿದರು. 500 ಕಿ.ಮೀ. ಉದ್ದದ ಯೋಜನೆಗೆ 1 ಲಕ್ಷ ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಅದೇ ಹಣದಲ್ಲಿ ಸಾಮಾನ್ಯ ಜನರಿಗೆ ಅನುಕೂಲವಾಗುವ ಸಾವಿರಾರು ಕಿಲೋಮೀಟರ್ ರೈಲು ಮಾರ್ಗಗಳನ್ನು ನಿರ್ಮಿಸಬಹುದಿತ್ತು ಎಂದು ಅಭಿಪ್ರಾಯಪಟ್ಟರು.
ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ರಕ್ಷಣೆಗೆ ಎಲ್ಲರೂ ಒಗ್ಗಟ್ಟಾಗಿ ಹೋರಾಡಬೇಕು. ಅನ್ಯಾಯದ ವಿರುದ್ಧದ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ಹೇಳಿದರು.
ವಂದೇ ಮಾತರಂ ವಿಚಾರವಾಗಿ ಮಾತನಾಡಿದ ಅವರು, ನರೇಂದ್ರ ಮೋದಿ ಅವರು ಮುಖ್ಯಮಂತ್ರಿಯಾಗಿ ಹಾಗೂ ಪ್ರಧಾನಿಯಾಗಿ ದೀರ್ಘಕಾಲ ಅಧಿಕಾರದಲ್ಲಿದ್ದರೂ ಈ ವಿಚಾರವನ್ನು ಈಗ ಏಕೆ ಮುನ್ನೆಲೆಗೆ ತರಲಾಗುತ್ತಿದೆ ಎಂದು ಪ್ರಶ್ನಿಸಿದರು.
‘ಬಾಯಿಗಳನ್ನು ಶುದ್ಧಗೊಳಿಸುವ ಅಗತ್ಯವಿದೆ’: ಪ್ರಕಾಶ್ ರಾಜ್
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಟ ಪ್ರಕಾಶ್ ರಾಜ್, ಶುದ್ಧೀಕರಣ ಮಾಡಬೇಕಾದರೆ ಸುಳ್ಳು ಹೇಳುವ, ಕೆಟ್ಟ ಮಾತುಗಳನ್ನು ಆಡುವ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸುವ ಬಾಯಿಗಳನ್ನು ಶುದ್ಧಗೊಳಿಸಬೇಕು ಎಂದು ಬಿಜೆಪಿ ಹಾಗೂ ಆರ್‌ಎಸ್‌ಎಸ್ ವಿರುದ್ಧ ವಾಗ್ದಾಳಿ ನಡೆಸಿದರು.
ದಕ್ಷಿಣ ಭಾರತದಲ್ಲಿ ಕ್ಷೇತ್ರ ಪುನರ್‌ವಿಂಗಡಣೆ ಹಾಗೂ ಮತದಾರರ ಪಟ್ಟಿ ಪ್ರಕ್ರಿಯೆ ಕುರಿತು ಆತಂಕ ವ್ಯಕ್ತಪಡಿಸಿದ ಅವರು, ಪ್ರಜಾಪ್ರಭುತ್ವದ ಹಕ್ಕುಗಳನ್ನು ರಕ್ಷಿಸಲು ಜನರು ಜಾಗರೂಕರಾಗಬೇಕು ಎಂದು ಕರೆ ನೀಡಿದರು.
‘ಖರ್ಗೆ ಅವರ ಕೈ ಬಲಪಡಿಸಬೇಕು’: ಬಿ.ಕೆ. ಹರಿಪ್ರಸಾದ್
ಗ್ರಂಥ ಬಿಡುಗಡೆ ಮಾಡಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ಖರ್ಗೆ ಅವರು ಶಿಕ್ಷಣ, ಕಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಹಲವು ಸುಧಾರಣಾ ಕಾರ್ಯಗಳನ್ನು ಮಾಡಿದ್ದಾರೆ. ಹಿಂದುಳಿದ ಕುಟುಂಬದಿಂದ ಬಂದ ವ್ಯಕ್ತಿಯೊಬ್ಬರು ದೇಶದ ಪ್ರಮುಖ ರಾಜಕೀಯ ಸ್ಥಾನಕ್ಕೆ ಏರಿರುವುದು ಅವರ ಹೋರಾಟದ ಪ್ರತೀಕ ಎಂದು ಹೇಳಿದರು.
ಸಂವಿಧಾನದ ರಕ್ಷಣೆಯ ಜವಾಬ್ದಾರಿ ಎಲ್ಲರ ಮೇಲಿದ್ದು, ಈ ನಿಟ್ಟಿನಲ್ಲಿ ಖರ್ಗೆ ಅವರ ಕೈ ಬಲಪಡಿಸಬೇಕು ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಖರ್ಗೆ ಅವರ ರಾಜಕೀಯ ಹಾಗೂ ಸಾರ್ವಜನಿಕ ಜೀವನವನ್ನು ಪರಿಚಯಿಸುವ ‘ಧೀಮಂತ ಧುರೀಣ’ ಅಭಿನಂದನಾ ಗ್ರಂಥದ ಕನ್ನಡ ಅನುವಾದ ಕೃತಿ ಲೋಕಾರ್ಪಣೆಗೊಂಡಿತು.
ವೀರಶೆಟ್ಟಿ ಗಾರಂಪಳ್ಳಿ ಅವರು ಗ್ರಂಥವನ್ನು ಪರಿಚಯಿಸಿದರು.
ಖ್ವಾಜಾ ಬಂದೇ ನವಾಝ್ ವಿಶ್ವವಿದ್ಯಾಲಯದ ಕುಲಾಧಿಪತಿ ಹಾಗೂ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಡಾ.ಸೈಯದ್ ಮುಹಮ್ಮದ್ ಅಲಿ ಅಲ್ ಹುಸೈನಿ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ಶಾಸಕರಾದ ಬಿ.ಆರ್.ಪಾಟೀಲ್, ಅಲ್ಲಮಪ್ರಭು ಪಾಟೀಲ್, ಕನೀಝ್ ಫಾತೀಮಾ, ಎಂ.ವೈ.ಪಾಟೀಲ್, ರಾಜಶೇಖರ ಪಾಟೀಲ್, ಜಗದೇವ ಗುತ್ತೇದಾರ್, ತಿಪ್ಪಣ್ಣಪ್ಪ ಕಮಕನೂರ, ಅಬ್ದುಲ್ ಮನ್ನಾನ್ ಶೇಠ್, ಸುಭಾಷ್ ಶಿಕ್ಷಣಕರ್, ಅಭಿಮನ್ಯು ಶೃಂಗೇರಿ, ಹೋರಾಟಗಾರ ಡಿ.ಜಿ. ಸಾಗರ, ಮೀನಾಕ್ಷಿ ಬಾಳಿ, ಆರ್.ಜಿ.ಶೆಟಕಾರ್, ದೇವಯ್ಯ ಗುತ್ತೇದಾರ್, ಲಕ್ಷ್ಮಣ ದಸ್ತಿ, ಚಂದ್ರಶೇಖರ್ ಪಾಟೀಲ್, ಮಹಾಪೌರ ವರ್ಷಾ ಜಾನೆ, ಪ್ರಕಾಶಕ ದತ್ತಾತ್ರಯ ಇಕ್ಕಳಕಿ, ಚೇತನ್ ಸಿಂಧೆ ಸೇರಿದಂತೆ ಹಲವರು ಹಲವು ಗಣ್ಯರು ವೇದಿಕೆಯ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಸವರಾಜ ದೇಶಮುಖ ವಹಿಸಿದ್ದರು. ಗ್ರಂಥದ ಅನುವಾದಕ ಆರ್.ಕೆ. ಹುಡಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಪ್ಪಗೆರೆ ಸೋಮಶೇಖರ್ ಸ್ವಾಗತಿಸಿದರು. ಸಿದ್ಧಾರ್ಥ್ ಚಿಮ್ಮ ಇದಲಾಯಿ ಪ್ರಾರ್ಥನಾ ಗೀತೆ ಹಾಡಿದರು.