ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅವಮಾನಿಸಿರುವುದು ಈ ನೆಲಕ್ಕೆ ಮಾಡಿದ ಅವಮಾನ: ಪ್ರೊ. ಪೋತೆ

‘ಕನ್ನಡ ಸಾಹಿತ್ಯ ಮತ್ತು ಅಸ್ಪೃಶ್ಯತೆ: ಸಮಕಾಲೀನ ತಲ್ಲಣಗಳು’ ಉಪನ್ಯಾಸ ಕಾರ್ಯಕ್ರಮ

Update: 2026-08-21 18:23 IST

ಕಲಬುರಗಿ: ಡಾ. ಬಿ.ಆರ್. ಅಂಬೇಡ್ಕರ್ ಅವರು ಕೇವಲ ಶೋಷಿತ ವರ್ಗದವರಿಗಾಗಿ ಸಂವಿಧಾನ ರಚಿಸಿಲ್ಲ. ದೇಶದ ಪ್ರತಿಯೊಬ್ಬ ನಾಗರಿಕನೂ ಸಂವಿಧಾನದ ಸೌಲಭ್ಯಗಳನ್ನು ಅನುಭವಿಸುತ್ತಿದ್ದಾನೆ. ಸಂವಿಧಾನದ ಆಶಯಗಳ ರಕ್ಷಣೆಗಾಗಿ ಶ್ರಮಿಸುತ್ತಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅವಮಾನಿಸಿರುವುದು ಬುದ್ಧ, ಬಸವ, ಗಾಂಧಿ ಹಾಗೂ ಅಂಬೇಡ್ಕರ್ ಅವರ ಚಿಂತನೆಗಳ ನೆಲದಲ್ಲಿ ನಡೆದ ಹೀನ ಕೃತ್ಯವಾಗಿದೆ ಎಂದು ಗುಲ್ಬರ್ಗಾ ವಿಶ್ವವಿದ್ಯಾಲಯದ ಕಲಾನಿಕಾಯದ ಡೀನ್ ಹಾಗೂ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ. ಎಚ್.ಟಿ. ಪೋತೆ ಹೇಳಿದರು.

ಗುಲ್ಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣದಲ್ಲಿ ಆಯೋಜಿಸಿದ್ದ ‘ಕನ್ನಡ ಸಾಹಿತ್ಯ ಮತ್ತು ಅಸ್ಪೃಶ್ಯತೆ: ಸಮಕಾಲೀನ ತಲ್ಲಣಗಳು’ ವಿಶೇಷ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಡಾ. ಬಿ.ಆರ್. ಅಂಬೇಡ್ಕರ್ ಅವರು ಮನುಸ್ಮೃತಿ ದಹನ ಹಾಗೂ ಮಹಾಡ್ ಚಳವಳಿಯ ಮೂಲಕ ಸಮಾನತೆಗಾಗಿ ಹೋರಾಟ ನಡೆಸಿ ನೂರು ವರ್ಷಗಳು ಕಳೆದಿವೆ. ಹುಟ್ಟಿನಿಂದಲೇ ಸಂಕಷ್ಟ, ಅವಮಾನ ಹಾಗೂ ಅಪಮಾನಗಳನ್ನು ಅನುಭವಿಸಿದ ಅಂಬೇಡ್ಕರ್ ಅವರಿಗೆ ಇಂದಿಗೂ ಅವಮಾನ ಮಾಡಲಾಗುತ್ತಿರುವುದು ವಿಷಾದನೀಯ. ಸಾಂಪ್ರದಾಯಿಕ ವ್ಯವಸ್ಥೆ ಹಾಗೂ ಗುಲಾಮಗಿರಿಯ ಮನಸ್ಥಿತಿಯಿಂದ ಹೊರಬಂದು ಅನ್ಯಾಯ ಮತ್ತು ಅವಮಾನಗಳ ವಿರುದ್ಧ ಧ್ವನಿ ಎತ್ತದಿದ್ದರೆ ಶೋಷಣೆಯಿಂದ ಮುಕ್ತಿ ಸಾಧ್ಯವಿಲ್ಲ ಎಂದರು.

ವೈಚಾರಿಕ ಚಿಂತಕ ಹಾಗೂ ಶರಣ ಸಾಹಿತಿ ಡಾ. ಜೆ.ಎಸ್. ಪಾಟೀಲ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಭಾರತವು ಸಂಘರ್ಷ ಹಾಗೂ ಚಳವಳಿಗಳ ನೆಲವಾಗಿದೆ. ಮನುಸ್ಮೃತಿಯ ನೆಲೆಯಲ್ಲಿ ದೇವರು ಮತ್ತು ಧರ್ಮದ ಹೆಸರಿನಲ್ಲಿ ಅಸ್ಪೃಶ್ಯರ ಮೇಲೆ ನಿರಂತರ ಶೋಷಣೆ ನಡೆಯುತ್ತಿದೆ. ಇಡೀ ಸಮಾಜ ವ್ಯವಸ್ಥೆಯನ್ನು ತಾರತಮ್ಯದ ನೆಲೆಯಲ್ಲಿ ಕಟ್ಟಿಹಾಕುವ ಹುನ್ನಾರಗಳು ಹೆಚ್ಚಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಕಲಬುರಗಿಯ ಪ್ರಜ್ಞಾವಂತ ಸಮಾಜ, ಬುದ್ಧಿಜೀವಿಗಳು ಹಾಗೂ ಹೋರಾಟಗಾರರು ಇಂತಹ ಬೆಳವಣಿಗೆಗಳ ವಿರುದ್ಧ ಧ್ವನಿ ಎತ್ತದಿರುವುದು ವಿಷಾದಕರ. ಬುದ್ಧ ಹಾಗೂ ಬಸವಣ್ಣನ ಕಾಲದಿಂದಲೂ ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ಮತ್ತು ಶೋಷಿತರ ಏಳಿಗೆಗಾಗಿ ನಿರಂತರ ಚಳವಳಿಗಳು ನಡೆದಿವೆ. ಅನ್ಯಾಯದ ವಿರುದ್ಧ ಧ್ವನಿ ಎತ್ತದೆ ತಾರತಮ್ಯವನ್ನು ಹೋಗಲಾಡಿಸಲು ಸಾಧ್ಯವಿಲ್ಲ ಎಂದರು.

ಮನುಷ್ಯ ಸಮಾಜದ ದೈನಂದಿನ ಬದುಕಿಗೆ ಅಗತ್ಯವಾದ ಜ್ಞಾನ ಹಾಗೂ ಸಮಾನತೆಯ ಸಂದೇಶವನ್ನು ಶರಣರು ನೀಡಿದ್ದಾರೆ. ಅವರ ವಿಚಾರಧಾರೆಗಳನ್ನು ಅನುಸರಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಡಾ. ಎಂ.ಬಿ. ಕಟ್ಟಿ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂದರ್ಶಕ ಪ್ರಾಧ್ಯಾಪಕ ಡಾ. ಸೂರ್ಯಕಾಂತ್ ಸುಜ್ಯಾತ್, ವಿವಿಧ ವಿಭಾಗಗಳ ಅಧ್ಯಾಪಕರು, ಕನ್ನಡ ಅಧ್ಯಯನ ಸಂಸ್ಥೆಯ ಕನ್ನಡ ಸಂಶೋಧನ ಸಂಘ ಹಾಗೂ ಕನ್ನಡ ಸಾಹಿತ್ಯ ಸಂಘದ ಪದಾಧಿಕಾರಿಗಳು, ಅಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸಂಗೀತ ವಿಭಾಗದ ಅಧ್ಯಾಪಕಿ ಡಾ. ಜಯ ದಾನಮ್ಮ ವಚನ ಗಾಯನ ಪ್ರಸ್ತುತಪಡಿಸಿದರು. ಡಾ. ಶಿವಗಂಗಾ ಬಿಲಗುಂದಿ ವಂದಿಸಿದರು. ಡಾ. ನಂದಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.


“ಕಲ್ಯಾಣ ಕರ್ನಾಟಕ ಭಾಗದಲ್ಲಿ ನಿರುದ್ಯೋಗದ ಸಮಸ್ಯೆ ಇದೆ. 371(ಜೆ) ತಿದ್ದುಪಡಿಯ ಮೂಲಕ ಶಿಕ್ಷಣ, ಉದ್ಯೋಗ ಹಾಗೂ ಅಭಿವೃದ್ಧಿಗೆ ಹಲವು ನಾಯಕರು ಹೋರಾಟ ನಡೆಸಿದ್ದಾರೆ. 371(ಜೆ) ತಿದ್ದುಪಡಿಗೆ ರಾಷ್ಟ್ರಮಟ್ಟದಲ್ಲಿ ಶ್ರಮಿಸಿದ ರಾಷ್ಟ್ರ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು ಸ್ವಚ್ಛಗೊಳಿಸಿರುವುದು ಇಡೀ ದೇಶಕ್ಕೆ ಮಾಡಿದ ಅಪಮಾನ. ರಾಜ್ಯ ಹಾಗೂ ರಾಷ್ಟ್ರಮಟ್ಟದ ಯಾವ ನಾಯಕರೂ ಈ ಕೃತ್ಯದ ವಿರುದ್ಧ ಮಾತನಾಡದೆ ಮೌನ ವಹಿಸಿರುವುದು ಬೇಸರದ ಸಂಗತಿ. ಈ ನಿಟ್ಟಿನಲ್ಲಿ ದೇಶದ ವಿದ್ಯಾರ್ಥಿ ಸಮುದಾಯ ಎಚ್ಚೆತ್ತುಕೊಳ್ಳಬೇಕು.”

— ಡಾ. ಜೆ.ಎಸ್. ಪಾಟೀಲ, ವೈಚಾರಿಕ ಚಿಂತಕ ಹಾಗೂ ಶರಣ ಸಾಹಿತಿ


“ಕಲ್ಯಾಣ ಕರ್ನಾಟಕ ಒಂದು ಕಾಲದಲ್ಲಿ ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶ ಎಂಬ ಹಣೆಪಟ್ಟಿಗೆ ಒಳಗಾಗಿತ್ತು. ರಾಷ್ಟ್ರ ನಾಯಕರು ಹಾಗೂ 371(ಜೆ)ಯ ರೂವಾರಿಗಳಾದ ಮಲ್ಲಿಕಾರ್ಜುನ ಖರ್ಗೆ ಅವರ ಪ್ರಯತ್ನದಿಂದಾಗಿ ಇಂದು ಕಲ್ಯಾಣ ಕರ್ನಾಟಕ ಶೈಕ್ಷಣಿಕ ಪ್ರಗತಿಯ ಕೇಂದ್ರವಾಗಿ ರೂಪುಗೊಂಡಿದೆ. ಸಮಾಜೋ–ರಾಜಕೀಯ ಕ್ಷೇತ್ರದ ಜತೆಗೆ ವೈದ್ಯಕೀಯ ಹಾಗೂ ತಾಂತ್ರಿಕ ಕ್ಷೇತ್ರಗಳಲ್ಲೂ ಹಿಂದೆಂದಿಗಿಂತ ಹೆಚ್ಚಿನ ಪ್ರಗತಿ ಕಾಣುತ್ತಿದೆ. ಪ್ರತಿವರ್ಷ ಕನಿಷ್ಠ 2,000 ವೈದ್ಯಕೀಯ ಸೀಟುಗಳು ಹಾಗೂ ಅಂದಾಜು 4,000 ಎಂಜಿನಿಯರಿಂಗ್ ಸೀಟುಗಳು ಈ ಭಾಗದ ವಿದ್ಯಾರ್ಥಿಗಳಿಗೆ ಲಭ್ಯವಾಗುತ್ತಿರುವುದಕ್ಕೆ 371(ಜೆ) ಪ್ರಮುಖ ಕಾರಣ ಎಂಬುದನ್ನು ಮರೆಯುವಂತಿಲ್ಲ.”

— ಪ್ರೊ. ಎಚ್.ಟಿ. ಪೋತೆ, ಡೀನ್, ಕಲಾನಿಕಾಯ, ಗುಲ್ಬರ್ಗಾ ವಿಶ್ವವಿದ್ಯಾಲಯ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News