ವಾಡಿ | ಉದ್ಯೋಗ ಖಾತರಿ ಯೋಜನೆಯಡಿ ಮಾನವ ದಿನಗಳು 125ಕ್ಕೆ ಹೆಚ್ಚಳ: ಪಿಡಿಒ

Update: 2026-08-22 19:52 IST

ವಾಡಿ: ವಿಕಸಿತ ಭಾರತ ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ (ಗ್ರಾಮೀಣ) (ವಿಬಿಜಿ–ರಾಮ್‌ಜಿ) ಯೋಜನೆಯಡಿ ಕಾರ್ಮಿಕರಿಗೆ ಒದಗಿಸುವ ಮಾನವ ದಿನಗಳನ್ನು 125ಕ್ಕೆ ಹೆಚ್ಚಿಸಲಾಗಿದೆ. ಉದ್ಯೋಗ ಚೀಟಿ ಹೊಂದಿರದ ಅರ್ಹ ಕಾರ್ಮಿಕರು ಹೊಸದಾಗಿ ಉದ್ಯೋಗ ಚೀಟಿ ಪಡೆಯಬೇಕು ಎಂದು ಇಂಗಳಗಿ ಗ್ರಾಮ ಪಂಚಾಯಿತಿ ಪಿಡಿಒ ಕಲ್ಯಾಣ ಕುಮಾರ ತಿಳಿಸಿದರು.

ಪಟ್ಟಣ ಸಮೀಪದ ಇಂಗಳಗಿ ಗ್ರಾಮದಲ್ಲಿ ನಡೆದ ವಿಬಿಜಿ–ರಾಮ್‌ಜಿ ರೋಜಗಾರ ಹಾಗೂ ಭಾರತ್ ಜೋಡೋ ಯುವ ಸಂಘದ ವಿಶೇಷ ಗ್ರಾಮಸಭೆಯಲ್ಲಿ ಅವರು ಮಾತನಾಡಿದರು.

ಯೋಜನೆಯಡಿ ಕಾರ್ಮಿಕರಿಗೆ ದಿನಕ್ಕೆ 382 ರೂ. ರಂತೆ ಕೂಲಿ ಪಾವತಿಸಲಾಗುತ್ತದೆ. ಪುರುಷರು ಮತ್ತು ಮಹಿಳೆಯರಿಗೆ ಯಾವುದೇ ಲಿಂಗ ತಾರತಮ್ಯವಿಲ್ಲದೆ ಸಮಾನ ವೇತನ ನೀಡಲಾಗುತ್ತದೆ. ಉದ್ಯೋಗ ಚೀಟಿ ಹೊಂದಿರದ ಅರ್ಹರು ಅಗತ್ಯ ದಾಖಲೆಗಳನ್ನು ಗ್ರಾಮ ಪಂಚಾಯಿತಿಗೆ ಸಲ್ಲಿಸಿ ಉದ್ಯೋಗ ಭದ್ರತಾ ಚೀಟಿ ಪಡೆಯಬಹುದು ಎಂದು ಹೇಳಿದರು.

ವಾರಾಂತ್ಯದಲ್ಲಿ ಕೂಲಿ ಪಾವತಿ ಕಡ್ಡಾಯ :

ಯೋಜನೆಯಡಿ ಕಾರ್ಮಿಕರ ದಿನಗೂಲಿ ವೆಚ್ಚವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 60:40ರ ಅನುಪಾತದಲ್ಲಿ ಭರಿಸಲಿವೆ. ವಾರಾಂತ್ಯದಲ್ಲಿ ಕೂಲಿ ಪಾವತಿಸುವುದು ಕಡ್ಡಾಯವಾಗಿದೆ. ಅರ್ಹ ವ್ಯಕ್ತಿಗೆ ಉದ್ಯೋಗ ನೀಡಲು ಸಾಧ್ಯವಾಗದಿದ್ದರೆ ನಿರುದ್ಯೋಗ ಭತ್ಯೆ ನೀಡುವ ಜವಾಬ್ದಾರಿ ರಾಜ್ಯ ಸರ್ಕಾರದ್ದಾಗಿದೆ ಎಂದು ಕಲ್ಯಾಣ ಕುಮಾರ ವಿವರಿಸಿದರು.

ಭಾರತ್ ಜೋಡೋ ಯುವ ಸಂಘಕ್ಕೆ ನೋಂದಣಿ :

16ರಿಂದ 35 ವರ್ಷದೊಳಗಿನ ಅರ್ಹ ಯುವಕರು ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ ಭಾರತ್ ಜೋಡೋ ಯುವ ಸಂಘಕ್ಕೆ ಸದಸ್ಯತ್ವ ಪಡೆಯಬಹುದು. ಗ್ರಾಮದಲ್ಲಿ ಸಂಘ ರಚನೆಯಾದ ಬಳಿಕ ಸಾಂಸ್ಕೃತಿಕ ಚಟುವಟಿಕೆಗಳಿಗೆ ಸರ್ಕಾರದಿಂದ ವಾರ್ಷಿಕ 10 ಲಕ್ಷ ರೂ. ವರೆಗೆ ಅನುದಾನ ದೊರೆಯಲಿದೆ ಎಂದು ಪಿಡಿಒ ಮಾಹಿತಿ ನೀಡಿದರು.

ಕರ್ನಾಟಕ ಭಾರತ್ ಜೋಡೋ ಯುವ ಸಂಘದ ಸದಸ್ಯತ್ವಕ್ಕೆ 16ರಿಂದ 35 ವರ್ಷ ವಯೋಮಿತಿಯ 100 ಯುವಕರಿಗೆ ಅವಕಾಶವಿದೆ. ಯುವಕರು ಸ್ವಯಂಪ್ರೇರಿತವಾಗಿ ನೋಂದಾಯಿಸಿಕೊಳ್ಳಬಹುದು. ಸಂಘವು ಕಾಯ್ದೆಯನ್ವಯ ರಚನೆಯಾಗಿ ಸರ್ಕಾರದ ನಿರ್ದೇಶನದಂತೆ ಕಾರ್ಯನಿರ್ವಹಿಸಲಿದೆ ಎಂದು ಅವರು ತಿಳಿಸಿದರು.

ಸಭೆಯಲ್ಲಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಸಂಗಮೇಶ ಹಿರೇಮಠ, ಗಣಕಯಂತ್ರ ಸಿಬ್ಬಂದಿ ರಾಜು ಸಂಕಾ, ಸಿದ್ರಾಮಪ್ಪ ವಗ್ಗನ್, ಕಾಯಕ ಮಿತ್ರ ಗಿಡ್ಡಮ್ಮ ಪವಾರ್, ಮಲ್ಲಪ್ಪ ನಾಟೀಕಾರ್, ಕಾಯಕ ಬಂಧು ಅಶೋಕ ರಾಠೋಡ, ಖದೀರ್ ಪಾಶಾ, ಮಮತಾ ನಾಟೀಕಾರ್, ಶಿಲ್ಪಾ ತೆಳಗೆರಿ, ನಿಂಗಪ್ಪ ಹೊನಗುಂಟಿ, ಮಹೆಬೂಬ್, ಶೋಭಾ ನಾಟೀಕಾರ್, ಶಿವಕುಮಾರ್ ತೆಳಗೆರಿ, ವಿಜಯಲತಾ ಸಂಕಾ, ಸಾವಿತ್ರಿ ಸೇರಿದಂತೆ ಗ್ರಾಮಸ್ಥರು ಹಾಗೂ ಕಾರ್ಮಿಕರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News