ಯಡ್ರಾಮಿ: ಲಂಚ ಸ್ವೀಕರಿಸುತ್ತಿದ್ದ ಪಿಎಸ್ಐ ಹಾಗೂ ಎಸ್‌ಬಿ ಲೋಕಾಯುಕ್ತ ಬಲೆಗೆ
ಪಿಎಸ್‌ಐ ವಿಶ್ವನಾಥ ಮುದರೆಡ್ಡಿ / ಎಸ್‌ಬಿ ಸಿಬ್ಬಂದಿ ಸಿದ್ದಣ್ಣ ಬಿರಾದಾರ
ಯಡ್ರಾಮಿ: ಅಕ್ಕಿ ವ್ಯಾಪಾರಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಲಂಚ ಪಡೆಯುತ್ತಿದ್ದಾಗ ಯಡ್ರಾಮಿ ಪೊಲೀಸ್ ಠಾಣೆಯ ಪಿಎಸ್‌ಐ ವಿಶ್ವನಾಥ ಮುದರೆಡ್ಡಿ ಹಾಗೂ ಎಸ್‌ಬಿ ಸಿಬ್ಬಂದಿ ಸಿದ್ದಣ್ಣ ಬಿರಾದಾರ ಅವರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಘಟನೆ ಗುರುವಾರ ನಡೆದಿದೆ.
ಆನಂದ ಕುಸ್ತಿ ಎಂಬವರ ಅವರ ಸಂಬಂಧಿಕರಿಂದ ಅಕ್ಕಿ ವ್ಯಾಪಾರಕ್ಕೆ ಸಂಬಂಧಿಸಿದಂತೆ ಸಹಕಾರ ನೀಡುವುದಾಗಿ ಹೇಳಿ ಆರೋಪಿಗಳು ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಸಂಬಂಧ ಮುಂಗಡವಾಗಿ ಜೂನ್ 12ರಂದು 20 ಸಾವಿರ ರೂ. ಅನ್ನು ಫೋನ್‌ಪೇ ಮೂಲಕ ಸ್ವೀಕರಿಸಿದ್ದರೆಂದು ತಿಳಿದುಬಂದಿದೆ. ಬಳಿಕ ಮತ್ತಷ್ಟು ರೂ. 30 ಸಾವಿರಕ್ಕೆ ಬೇಡಿಕೆ ಇಟ್ಟಿದ್ದು, ಅದರ ಪೈಕಿ ಗುರುವಾರ ಯಡ್ರಾಮಿ ಪೊಲೀಸ್ ಠಾಣೆ ಆವರಣದಲ್ಲಿ ರೂ. 20 ಸಾವಿರ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಇಬ್ಬರನ್ನು ಪೊಲೀಸರನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಗಂಭೀರ ಪ್ರಕರಣಗಳ ತನಿಖೆ ಹಾಗೂ ಆರೋಪಿಗಳ ಬಂಧನದಲ್ಲಿ ತೋರಿದ ಕಾರ್ಯಕ್ಷಮತೆಗಾಗಿ ಪಿಎಸ್‌ಐ ವಿಶ್ವನಾಥ ಮುದರೆಡ್ಡಿ ಅವರು 2024-25ನೇ ಸಾಲಿನಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಚಿನ್ನದ ಪದಕವನ್ನು ಪಡೆದಿದ್ದರು.
ಲೋಕಾಯುಕ್ತ ಎಸ್‌ಪಿ ಸಿದ್ಧರಾಜು ಅವರ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಅರುಣ್ ಮರಗುಂಡಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಮಲ್ಲಿನಾಥ, ರಾನೋಜಿ ಬಸವರಾಜ ಸೇರಿದಂತೆ ಇತರ ಅಧಿಕಾರಿಗಳು ಭಾಗವಹಿಸಿದ್ದರು.