ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಿಂದ ಕಲಬುರಗಿ ಬಸ್ ನಿಲ್ದಾಣಗಳ ಸೌಲಭ್ಯ ಪರಿಶೀಲನೆ
ಮಹಿಳಾ ಸುರಕ್ಷತೆಗೆ ಆದ್ಯತೆ ನೀಡುವಂತೆ ಸೂಚನೆ
ಕಲಬುರಗಿ: ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷೆ ಚಂದ್ರಿಕಾ ಪರಮೇಶ್ವರ್ ಅವರ ನೇತೃತ್ವದಲ್ಲಿ ಕೇಂದ್ರ ಬಸ್ ನಿಲ್ದಾಣ ಹಾಗೂ ಸೂಪರ್ ಮಾರ್ಕೆಟ್ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ವಿವಿಧ ಸೌಲಭ್ಯಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ವಿಜಯಕುಮಾರ್ ಕಟ್ಟಿಮನಿ ಹಾಗೂ ಜಿಲ್ಲಾ ಸದಸ್ಯ ವಿನೇಶ್ ಶಹಾಬಾದಕರ್ ಉಪಸ್ಥಿತರಿದ್ದು, ಸಾರ್ವಜನಿಕರಿಂದ ಅಹವಾಲುಗಳು ಹಾಗೂ ಕುಂದುಕೊರತೆಗಳನ್ನು ಆಲಿಸಿದರು. ಬಳಿಕ ಬಸ್ ನಿಲ್ದಾಣದ ಅಭಿವೃದ್ಧಿ, ಸ್ವಚ್ಛತೆ ಹಾಗೂ ಮೂಲಭೂತ ಸೌಲಭ್ಯಗಳ ಕುರಿತು ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ವಿಶೇಷವಾಗಿ ಮಹಿಳೆಯರು ಹಾಗೂ ಹೆಣ್ಣುಮಕ್ಕಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು. ಬಸ್ ನಿಲ್ದಾಣದಲ್ಲಿನ ಶೌಚಾಲಯಗಳ ನಿರ್ವಹಣೆ, ತಾಯಿ-ಮಕ್ಕಳ ಕೊಠಡಿ, ಹಾಲುಣಿಸುವ ಕೊಠಡಿ, ಪೊಲೀಸ್ ಸಹಾಯ ಕೇಂದ್ರ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಸ್ವಚ್ಛತಾ ನಿರ್ವಹಣೆಯನ್ನು ಇನ್ನಷ್ಟು ಸುಧಾರಿಸುವಂತೆ ಸೂಚಿಸಿದರು.
ರಾಜ್ಯ ಸರ್ಕಾರದ ಜನಪರ ಯೋಜನೆಗಳು ಹಾಗೂ ಪಂಚ ಗ್ಯಾರಂಟಿ ಯೋಜನೆಗಳ ಕುರಿತು ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಲಾಯಿತು.
ಭೇಟಿಯ ವೇಳೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದು, ಬಸ್ ನಿಲ್ದಾಣದಲ್ಲಿನ ಸೌಲಭ್ಯಗಳು ಮತ್ತು ಅಭಿವೃದ್ಧಿ ಕಾಮಗಾರಿಗಳ ಕುರಿತು ಮಾಹಿತಿ ನೀಡಿದರು. ಸಾರ್ವಜನಿಕರ ಅನುಕೂಲಕ್ಕಾಗಿ ಅಗತ್ಯ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತವಾಗಿ ಕೈಗೊಳ್ಳುವಂತೆ ಸಮಿತಿ ಸದಸ್ಯರು ಸೂಚನೆ ನೀಡಿದರು.