×
Ad

ಅಫಜಲಪುರ | ಜಮೀನಿಗೆ ತೆರಳುವ ಹಾದಿ ಬಂದ್: ಸಮಸ್ಯೆ ಪರಿಹಾರಕ್ಕೆ ತಹಸೀಲ್ದಾರರ ಮಧ್ಯಸ್ಥಿಕೆ ಕೋರಿದ ರೈತ

Update: 2026-06-18 19:07 IST

ಅಫಜಲಪುರ: ರಸ್ತೆ ಕಾಮಗಾರಿ ವೇಳೆ ನಿರ್ಮಿಸಲಾದ ಆಳವಾದ ಚರಂಡಿಯಿಂದ ಜಮೀನಿಗೆ ತೆರಳುವ ಹಾದಿ ಸಂಪೂರ್ಣ ಬಂದ್ ಆಗಿರುವ ಹಿನ್ನೆಲೆಯಲ್ಲಿ ಸಮಸ್ಯೆ ಪರಿಹರಿಸಿ ಸಂಚಾರಕ್ಕೆ ಅನುಕೂಲ ಕಲ್ಪಿಸುವಂತೆ ತಾಲೂಕಿನ ಉಡಚಾಣ ಗ್ರಾಮದ ರೈತ ಬಸವರಾಜ ಶರಣಪ್ಪ ಕುಂಬಾರ ಅವರು ತಹಸೀಲ್ದಾರರಿಗೆ ಮನವಿ ಸಲ್ಲಿಸಿದ್ದಾರೆ.

ಮನವಿಯಲ್ಲಿ ಅವರು ತಿಳಿಸಿರುವಂತೆ, ಉಡಚಾಣ ಗ್ರಾಮದ ಸರ್ವೆ ನಂ. 425/2ರಲ್ಲಿರುವ 2 ಎಕರೆ 20 ಗುಂಟೆ ಜಮೀನಿಗೆ ಹಲವು ವರ್ಷಗಳಿಂದ ದಕ್ಷಿಣ ಭಾಗದಲ್ಲಿರುವ ಹಾದಿಯನ್ನು ಬಳಸಿಕೊಂಡು ಸಂಚಾರ ನಡೆಸಲಾಗುತ್ತಿತ್ತು. ಆದರೆ ಇತ್ತೀಚೆಗೆ ಅಳ್ಳಗಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ನೂತನ ಡಾಂಬರ ರಸ್ತೆ ನಿರ್ಮಾಣ ಕಾಮಗಾರಿ ವೇಳೆ ರಸ್ತೆಯ ಬದಿಯಲ್ಲಿ ಜೆಸಿಬಿ ಯಂತ್ರದ ಮೂಲಕ ಆಳವಾದ ಚರಂಡಿ ನಿರ್ಮಿಸಿರುವುದರಿಂದ ಜಮೀನಿಗೆ ಹೋಗಿ ಬರಲು ಇದ್ದ ಮಾರ್ಗ ಸಂಪೂರ್ಣವಾಗಿ ಮುಚ್ಚಲ್ಪಟ್ಟಿದೆ.

ಈ ಬೆಳವಣಿಗೆಯಿಂದ ಕೃಷಿ ಚಟುವಟಿಕೆಗಳಿಗೆ ತೀವ್ರ ತೊಂದರೆ ಉಂಟಾಗಿದ್ದು, ಟ್ರ್ಯಾಕ್ಟರ್ ಸೇರಿದಂತೆ ಕೃಷಿ ಯಂತ್ರೋಪಕರಣಗಳು ಹಾಗೂ ವಾಹನಗಳ ಸಂಚಾರ ಅಸಾಧ್ಯವಾಗಿರುವುದರಿಂದ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಅವರು ದೂರಿದ್ದಾರೆ.

ಜಮೀನಿಗೆ ಸುಗಮ ಸಂಪರ್ಕ ಇಲ್ಲದ ಕಾರಣ ಬಿತ್ತನೆ, ಬೆಳೆ ನಿರ್ವಹಣೆ ಹಾಗೂ ಕೃಷಿ ಉತ್ಪನ್ನಗಳ ಸಾಗಣೆಗೆ ಅಡಚಣೆ ಉಂಟಾಗುತ್ತಿದ್ದು, ಇದರಿಂದ ಆರ್ಥಿಕ ನಷ್ಟ ಸಂಭವಿಸುವ ಆತಂಕ ವ್ಯಕ್ತಪಡಿಸಿದ್ದಾರೆ.

ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ವಾಸ್ತವ ಸ್ಥಿತಿಯನ್ನು ಅವಲೋಕಿಸಬೇಕು. ಜಮೀನಿಗೆ ತೆರಳಲು ಅಗತ್ಯವಾದ ರಸ್ತೆ ಅಥವಾ ಪರ್ಯಾಯ ಹಾದಿಯನ್ನು ಶೀಘ್ರವಾಗಿ ನಿರ್ಮಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದು ಬಸವರಾಜ ಶರಣಪ್ಪ ಕುಂಬಾರ ಅವರು ತಹಸೀಲ್ದಾರರಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದ್ದಾರೆ.




 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News