ಕಾಸರಗೋಡು: ಕೇರಳ ರಾಜ್ಯಾದ್ಯಂತ ಆಹಾರ ಸುರಕ್ಷತಾ ಇಲಾಖೆ ಹಮ್ಮಿಕೊಂಡಿರುವ ‘ಆಪರೇಷನ್ ತಿಳಿಮಾ’ ಯೋಜನೆಯ ಅಂಗವಾಗಿ ಕಾಸರಗೋಡು ಮತ್ತು ಕಾಞಂಗಾಡ್ ನಗರ ಪ್ರದೇಶಗಳಲ್ಲಿ ಎರಡು ದಿನಗಳ ಕಾಲ ವಿಶೇಷ ಜಾಗೃತ ದಳದಿಂದ ತಪಾಸಣೆ ನಡೆಸಲಾಯಿತು.

ಬಳಸಿದ ಅಡುಗೆ ಎಣ್ಣೆಯನ್ನು ಪುನಃ ಆಹಾರ ಪದಾರ್ಥಗಳ ತಯಾರಿಕೆಗೆ ಬಳಸಿ ಗ್ರಾಹಕರ ಆರೋಗ್ಯಕ್ಕೆ ಹಾನಿ ಮಾಡುವುದನ್ನು ತಡೆಯುವುದು ಹಾಗೂ ಅದನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವುದು ಕಾರ್ಯಾಚರಣೆಯ ಮುಖ್ಯ ಉದ್ದೇಶವಾಗಿತ್ತು.

ಕಾಸರಗೋಡು ಆಹಾರ ಸುರಕ್ಷತಾ ಸಹಾಯಕ ಆಯುಕ್ತೆ ಸಂಗೀತ ಎಸ್. ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.

21 ಹೋಟೆಲ್‌ಗಳಿಗೆ ನೋಟಿಸ್ :

ವಿವಿಧ ಉಪಹಾರಗೃಹಗಳು, ಬೇಕರಿಗಳು ಹಾಗೂ ಖಾದ್ಯ ತಯಾರಿಕಾ ಘಟಕಗಳ ಮೇಲೆ ನಡೆಸಿದ ತಪಾಸಣೆಯಲ್ಲಿ 188 ಲೀಟರ್ ಬಳಸಿದ ಅಡುಗೆ ಎಣ್ಣೆ ಪತ್ತೆಯಾಗಿದ್ದು, ನಿಯಮಾನುಸಾರ ಅದನ್ನು ವಶಕ್ಕೆ ಪಡೆಯಲಾಗಿದೆ. ಇದೇ ವೇಳೆ ಆಹಾರ ಸುರಕ್ಷತಾ ಮಾನದಂಡಗಳು ಹಾಗೂ ಸ್ವಚ್ಛತಾ ನಿಯಮಗಳನ್ನು ಉಲ್ಲಂಘಿಸಿದ 21 ಸಂಸ್ಥೆಗಳಿಗೆ ಭಾರಿ ದಂಡ ವಿಧಿಸಲು ನೋಟಿಸ್ ಜಾರಿ ಮಾಡಲಾಗಿದೆ.

ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಆಹಾರ ಸುರಕ್ಷತೆಯನ್ನು ಖಾತ್ರಿಪಡಿಸಲು ಇಂತಹ ಕಟ್ಟುನಿಟ್ಟಿನ ತಪಾಸಣೆಗಳು ಮುಂದೆಯೂ ರಾಜ್ಯಾದ್ಯಂತ ಮುಂದುವರಿಯಲಿವೆ ಎಂದು ಆಹಾರ ಸುರಕ್ಷತಾ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor