ಕಾಸರಗೋಡು: ‘ಕ್ರೀಡೆಯೊಂದಿಗೆ ನಿಲ್ಲಿ, ಲಹರಿಯನ್ನು ದೂರವಿಡಿ’ ಎಂಬ ಸಂದೇಶದೊಂದಿಗೆ ಕೇರಳ ಪೊಲೀಸರು ಆಯೋಜಿಸಿರುವ ರಾಜ್ಯಮಟ್ಟದ ಮಾದಕ ವಸ್ತು ವಿರೋಧಿ ಮ್ಯಾರಥಾನ್ ಹಾಗೂ ಜ್ಯೋತಿ ಮೆರವಣಿಗೆಗೆ ಕಾಸರಗೋಡಿನಿಂದ ಶನಿವಾರ ಆರಂಭವಾಯಿತು.

ಕೇರಳ ಪೊಲೀಸ್ ಅಥ್ಲೆಟಿಕ್ ಮೀಟ್ 2026ರ ಅಂಗವಾಗಿ ಆಯೋಜಿಸಿರುವ ಈ ಜನಜಾಗೃತಿ ಅಭಿಯಾನ ಸೆಪ್ಟೆಂಬರ್ 8ರಂದು ತಿರುವನಂತಪುರದಲ್ಲಿ ಸಮಾಪನಗೊಳ್ಳಲಿದೆ. ಕಾಸರಗೋಡು ಹೊಸ ಬಸ್ ನಿಲ್ದಾಣದ ಆವರಣದಲ್ಲಿ ಬೆಳಗ್ಗೆ 7 ಗಂಟೆಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕಾಸರಗೋಡು ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಲ್ಲಟ್ರ ಮಾಹಿನ್ ಹಾಜಿ, ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್, ಉದುಮ ಶಾಸಕ ನೀಲಕಂಠನ್, ಹೊಸದುರ್ಗ ಶಾಸಕ ಗೋವಿಂದನ್ ಪಳ್ಳಿಕ್ಕಾಪಿಲ್, ತೃಕ್ಕರಿಪ್ಪೂರ್ ಶಾಸಕ ಸಂದೀಪ್ ವಾರಿಯರ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಾಬು ಅಬ್ರಹಾಂ, ಕಾಸರಗೋಡು ಬ್ಲಾಕ್ ಪಂಚಾಯತ್ ಅಧ್ಯಕ್ಷ ಅಬ್ದುಲ್ಲಾಕುಂಞಿ, ನಗರಸಭಾ ಅಧ್ಯಕ್ಷೆ ಶಾಹಿನಾ ಸಲೀಂ ಹಾಗೂ ಶಿಕ್ಷಣ ಉಪನಿರ್ದೇಶಕ ರಫೀಕ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

ಕಾಸರಗೋಡು ಎಎಸ್‌ಪಿ ಅಚ್ಯುತ್ ಅಶೋಕ್ ಐಪಿಎಸ್ ಅವರು ಮಾದಕ ವಸ್ತು ವಿರೋಧಿ ಪ್ರತಿಜ್ಞೆ ಬೋಧಿಸಿದರು. ಬಳಿಕ ‘ತೂಫಾನ್’ ಮಾದಕ ವಿರೋಧಿ ಪ್ರಚಾರ ವಾಹನವನ್ನು ಜಿಲ್ಲಾಧಿಕಾರಿ ಕೆ. ಅರ್ಜುನ್ ಪಾಂಡ್ಯನ್ ಅನಾವರಣಗೊಳಿಸಿದರು.

ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ ಜಗದೀಶ್ ಕುಂಬಳೆ ಹಾಗೂ ಅಂತಾರಾಷ್ಟ್ರೀಯ ಫುಟ್ಬಾಲ್ ಆಟಗಾರ ಮುಹಮ್ಮದ್ ರಫಿ ಅವರಿಂದ ಆರ್‌ಆರ್‌ಆರ್‌ಎಫ್ ಕಮಾಂಡಂಟ್ ಶಕ್ತಿ ಸಿಂಗ್ ಆರ್ಯ ದೀಪ ಸ್ವೀಕರಿಸಿದರು. ಜನಪ್ರತಿನಿಧಿಗಳು ಹಾಗೂ ಗಣ್ಯರು ಸೇರಿ ಮ್ಯಾರಥಾನ್‌ಗೆ ಹಸಿರು ನಿಶಾನೆ ತೋರಿದರು.

ಬಳಿಕ ಪಿಲಿಕುಂಜೆ ನಗರಸಭಾ ಕಾನ್ಫರೆನ್ಸ್ ಹಾಲ್‌ನಲ್ಲಿ ಎನ್‌ಎಸ್‌ಎಸ್, ಎನ್‌ಸಿಸಿ ಹಾಗೂ ಎಸ್‌ಪಿಸಿ ಕ್ಯಾಡೆಟ್‌ಗಳೊಂದಿಗೆ ಜಿಲ್ಲಾ ಪೊಲೀಸ್ ಮುಖ್ಯಸ್ಥರು ಸಂವಾದ ನಡೆಸಿದರು. ಲಹರಿ ವಿರೋಧಿ ಜಾಗೃತಿ ಅಧಿವೇಶನಕ್ಕೆ ಕಾಸರಗೋಡು ಡಿವೈಎಸ್‌ಪಿ ಡಾ. ವಿ. ಬಾಲಕೃಷ್ಣನ್ ನೇತೃತ್ವ ನೀಡಿದರು.

ಜಿಲ್ಲಾ ಪೊಲೀಸ್ ಮುಖ್ಯಸ್ಥ ಪಿ. ನಿತಿನ್‌ರಾಜ್ ಐಪಿಎಸ್ ಸ್ವಾಗತಿಸಿದರು. ಕಾಸರಗೋಡು ಡಿವೈಎಸ್‌ಪಿ ಟಿ. ಉತ್ತಮದಾಸ್ ವಂದಿಸಿದರು.

ಸಂಜೆ 3 ಗಂಟೆಗೆ ಕಾಸರಗೋಡು ಡಿಎಚ್‌ಕ್ಯೂ ಪೊಲೀಸ್ ಟರ್ಫ್‌ನಲ್ಲಿ ಎಂಟು ತಂಡಗಳ ಭಾಗವಹಿಸುವಿಕೆಯೊಂದಿಗೆ ‘ತೂಫಾನ್ ಕಿಕ್’ ಕ್ರೀಡಾ ಕಾರ್ನಿವಲ್ ನಡೆಯಲಿದೆ. ಕ್ರೀಡೆಯ ಮೂಲಕ ಯುವಜನರನ್ನು ಲಹರಿಯಿಂದ ದೂರವಿಡುವ ಉದ್ದೇಶದಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

 

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor