ಕಾಸರಗೋಡು: ವ್ಯಾಪಾರಿಯನ್ನು ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿಸಿ ಹಣ ವಸೂಲಿ; ದಂಪತಿ ಸೇರಿ ಮೂವರ ಬಂಧನ
ಕಾಸರಗೋಡು: ವ್ಯಾಪಾರಿಯೊಬ್ಬರನ್ನು ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿಸಿ, ಫೋಟೋ ಮತ್ತು ವೀಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ಆರೋಪದ ಮೇಲೆ ದಂಪತಿ ಸೇರಿದಂತೆ ಮೂವರನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.
ಕುಬಣೂರು ನಿವಾಸಿ ರಿಜ್ವಾನ, ಆಕೆಯ ಪತಿ ಹಸನ್ ಆಸಿಫ್ ಹಾಗೂ ಇವರ ಸಂಬಂಧಿ ಸಿರಾಜ್ ಬಂಧಿತ ಆರೋಪಿಗಳು. 64 ವರ್ಷದ ವ್ಯಾಪಾರಿಯೊಬ್ಬರನ್ನು ಹನಿಟ್ರ್ಯಾಪ್‌ಗೆ ಸಿಲುಕಿಸಿ ಹಣ ವಸೂಲಿ ಮಾಡಲಾಗುತ್ತಿತ್ತು. ಆರೋಪಿಗಳು ಮತ್ತಷ್ಟು ದೊಡ್ಡ ಮೊತ್ತಕ್ಕೆ ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ ಸಂತ್ರಸ್ತ ವ್ಯಾಪಾರಿ ಪೊಲೀಸರಿಗೆ ದೂರು ನೀಡಿದ್ದರು.
ಆಗಸ್ಟ್ 16ರಂದು ತಾನು ಪಡೆದಿದ್ದ 5,000 ರೂ. ಸಾಲವನ್ನು ಮರಳಿ ನೀಡುವುದಾಗಿ ನಂಬಿಸಿದ ರಿಜ್ವಾನ, ವ್ಯಾಪಾರಿಯನ್ನು ತನ್ನ ಮನೆಗೆ ಕರೆಸಿಕೊಂಡಿದ್ದಾಳೆ. ಬಳಿಕ ಆತನನ್ನು ಬೆಡ್‌ರೂಮ್‌ಗೆ ಕರೆದೊಯ್ದು, ಮೊದಲೇ ಸಿದ್ಧತೆ ಮಾಡಿಕೊಂಡಿದ್ದ ಉಳಿದ ಆರೋಪಿಗಳೊಂದಿಗೆ ಸೇರಿ ಫೋಟೋ ಮತ್ತು ವೀಡಿಯೊಗಳನ್ನು ಚಿತ್ರೀಕರಿಸಿದ್ದಾರೆ ಎನ್ನಲಾಗಿದೆ.
ನಂತರ ಈ ದೃಶ್ಯಗಳನ್ನು ಸಾರ್ವಜನಿಕಗೊಳಿಸುವುದಾಗಿ ಬೆದರಿಸಿ ವ್ಯಾಪಾರಿಯಿಂದ ಹಣ, ಎಟಿಎಂ ಕಾರ್ಡ್ ಹಾಗೂ ಮೊಬೈಲ್ ಫೋನ್‌ಗಳನ್ನು ಕಸಿದುಕೊಂಡಿದ್ದಾರೆ. ಆರಂಭದಲ್ಲಿ 1,500 ರೂ. ನಗದು, ಒಂದು ಮೊಬೈಲ್ ಹಾಗೂ ಕಾರಿನ ಕೀಲಿಯನ್ನು ಕಿತ್ತುಕೊಂಡ ಆರೋಪಿಗಳು, ಬಳಿಕ ಕಾರಿನಲ್ಲಿದ್ದ 25,000 ರೂ. ಮೌಲ್ಯದ ಮತ್ತೊಂದು ಮೊಬೈಲ್ ಮತ್ತು ಎರಡು ಎಟಿಎಂ ಕಾರ್ಡ್‌ಗಳನ್ನು ದೋಚಿದ್ದಾರೆ ಎನ್ನಲಾಗಿದೆ.
ಜೀವ ಬೆದರಿಕೆ ಹಾಕಿ ಎಟಿಎಂ ಪಿನ್ ನಂಬರ್ ಪಡೆದು ಬ್ಯಾಂಕ್ ಖಾತೆಯಿಂದ 7,200 ರೂ. ಡ್ರಾ ಮಾಡಿದ್ದಾರೆ. ಅಲ್ಲದೆ, ಆಗಸ್ಟ್ 17ರಂದು ವ್ಯಾಪಾರಿಯ ಅಂಗಡಿಗೆ ನೇರವಾಗಿ ತೆರಳಿ ಮತ್ತೆ 5,000 ರೂ. ವಸೂಲಿ ಮಾಡಿದ್ದಾರೆ. ಇದಾದ ಬಳಿಕ ಇನ್ನೂ 2 ಲಕ್ಷ ರೂ. ನೀಡುವಂತೆ ಆರೋಪಿಗಳು ಪಟ್ಟು ಹಿಡಿದಿದ್ದರು ಎನ್ನಲಾಗಿದೆ.
ಇದರಿಂದ ಸಹಿಸಲಾರದ ವ್ಯಾಪಾರಿ ಕುಂಬಳೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಮೂವರನ್ನು ಬಂಧಿಸಿದ್ದಾರೆ.