Kodagu | 64 ಅಲ್ಪಸಂಖ್ಯಾತ ಮತದಾರರ ಹೆಸರು ಅಳಿಸಲು ಯತ್ನ ಆರೋಪ : ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಘಟನೆ; ಕಾನೂನು ಕ್ರಮಕ್ಕೆ ಆಗ್ರಹ
ಕೊಡ್ಲಿಪೇಟೆ : ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 64 ಅಲ್ಪಸಂಖ್ಯಾತ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸಲು ಫಾರಂ 7 ಅರ್ಜಿಗಳ ಮೂಲಕ ಪ್ರಯತ್ನ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಈ ವಿಚಾರ ಮಾದ್ಯಮಗಳಲ್ಲಿ ಬಿತ್ತರವಾಗಿದ್ದು, ಸ್ಥಳೀಯವಾಗಿ ಚರ್ಚೆಗೆ ಕಾರಣವಾಗಿದೆ.
ʼಮತದಾರರ ಪಟ್ಟಿಯಿಂದ ಹೆಸರು ಅಳಿಸಲು ಸಲ್ಲಿಕೆಯಾಗಿರುವ ಫಾರಂ 7 ಅರ್ಜಿಗಳ ಕುರಿತು ಸಮಗ್ರ ಪರಿಶೀಲನೆ ನಡೆಸಬೇಕು. ಅರ್ಜಿಗಳನ್ನು ಯಾರು ಸಲ್ಲಿಸಿದ್ದಾರೆ, ಯಾವ ಕಾರಣಗಳನ್ನು ನಮೂದಿಸಲಾಗಿದೆ ಹಾಗೂ ಸಂಬಂಧಪಟ್ಟ ಮತದಾರರ ಹೆಸರುಗಳನ್ನು ಅಳಿಸಲು ಕಾನೂನುಬದ್ಧ ಕಾರಣಗಳಿವೆಯೇ ಎಂಬುದನ್ನು ಚುನಾವಣಾಧಿಕಾರಿಗಳು ಪರಿಶೀಲಿಸಬೇಕುʼ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಚುನಾವಣಾ ಆಯೋಗದ ಫಾರಂ 7 ಮಾರ್ಗಸೂಚಿಯ ಪ್ರಕಾರ, ಈಗಾಗಲೇ ಮತದಾರರ ಪಟ್ಟಿಯಲ್ಲಿರುವ ವ್ಯಕ್ತಿಯ ಹೆಸರನ್ನು ಅಳಿಸಲು ಮರಣ, ಶಾಶ್ವತವಾಗಿ ಸ್ಥಳಾಂತರ, ಈಗಾಗಲೇ ಬೇರೆಡೆ ನೋಂದಣಿ ಸೇರಿದಂತೆ ನಿರ್ದಿಷ್ಟ ಕಾರಣಗಳನ್ನು ನಮೂದಿಸಬೇಕು. ಆ ಕಾರಣವನ್ನು ಸಮರ್ಥಿಸುವ ಹೊಣೆ ಅರ್ಜಿ ಸಲ್ಲಿಸುವವರ ಮೇಲಿದೆ.
ಈ ಹಿನ್ನೆಲೆಯಲ್ಲಿ ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಲ್ಲಿಕೆಯಾಗಿರುವ ಎಲ್ಲಾ ಫಾರಂ 7 ಅರ್ಜಿಗಳನ್ನು ಪರಿಶೀಲಿಸಿ, ಅರ್ಜಿಗಳ ಹಿಂದೆ ಬಿಜೆಪಿ ಕಾರ್ಯಕರ್ತರು ಅಥವಾ ಬೆಂಬಲಿಗರು ಇದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಈ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಸ್ಥಳೀಯ ಮುಖಂಡರುಗಳಾದ ಎ.ಸಿ.ನಾಗರಾಜ್ , ಬಸವರಾಜ್ ,ಲೊಕೇಶ್ ಎಂಬುವವರು ಸೆ.23 ರಂದು ರಾತ್ರಿ ಅರ್ಜಿ ತಂದು ಕೊಟ್ಟಿರುವುದಾಗಿ ಮತಗಟ್ಟೆ ಅಧಿಕಾರಿ ಮಾಹಿತಿ ನೀಡಿದ್ದಾರೆ .
ಲೊಕೇಶ್ ಮತ್ತು ಅವರ ಪತ್ನಿ ಮಾದ್ಯಮವೊಂದರಲ್ಲಿ ಮಾತನಾಡಿರುವುದು ಸುದ್ದಿಯಾಗಿದೆ. ಈ ಹಿನ್ನೆಲೆಯಲ್ಲಿ ಆರೋಪದ ಸತ್ಯಾಸತ್ಯತೆ ಚುನಾವಣಾಧಿಕಾರಿಗಳು ಪರಿಶೀಲನೆ ನಡೆಸಿ ಕಾನೂನುಬದ್ಧ ಕ್ರಮಕ್ಕೆ ಒತ್ತಾಯಿಸಲು ಶುಕ್ರವಾರ ಬೆಳಿಗ್ಗೆ ಸಂತ್ರಸ್ತರೆಂದು ಹೇಳಲಾದ ಮತದಾರರು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರುಗಳು ಕೊಡ್ಲಿಪೇಟೆ ಕಂದಾಯ ಇಲಾಖೆಯ ಕಚೇರಿ ಮುಂದೆ ಸೇರಿದ್ದರು. ಈ ಸಂದರ್ಭದಲ್ಲಿ ಕಂದಾಯ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದು, ಪ್ರಕರಣದ ಕುರಿತು ಸೂಕ್ತ ಪರಿಶೀಲನೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕೊಡ್ಲಿಪೇಟೆ ವಲಯ ಕಾಂಗ್ರೆಸ್ ಅಧ್ಯಕ್ಷ ಔರಂಗಜೇಬ್, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಜನಾರ್ದನ್, ತಾಲೂಕು ಕೆಡಿಪಿ ಸಮಿತಿ ಸದಸ್ಯ ವೇದಕುಮಾರ್, ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಪಾವನ, ಬ್ಯಾಡಗೊಟ್ಟ ವಲಯ ಕಾಂಗ್ರೆಸ್ ಅಧ್ಯಕ್ಷ ಸುಲೈಮಾನ್, ಮುಖಂಡರಾದ ಝಕರೀಯಾ ಹಾಗೂ ಅಬ್ದುಲ್ ಖಾದರ್ ಮಾತನಾಡಿದರು.
ಯುವ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ನಿಸಾರ್, ಬ್ಯಾಡಗೊಟ್ಟ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹನೀಫ್ , ಮುಖಂಡರಾದ ಗಗನ್ ರೈ, ಹಮೀದ್, ದೊಡ್ಡಯ್ಯ, ಬಿ.ಎಂ. ಅಬ್ದುಲ್ ಲತೀಫ್, ಅಬ್ದುಲ್ ರಹಮಾನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ʼಅರ್ಹ ಮತದಾರರ ಹೆಸರುಗಳನ್ನು ಯಾವುದೇ ಕಾರಣಕ್ಕೂ ಅನ್ಯಾಯವಾಗಿ ಮತದಾರರ ಪಟ್ಟಿಯಿಂದ ತೆಗೆದುಹಾಕಬಾರದು. ಫಾರಂ 7 ಅರ್ಜಿಗಳ ಕುರಿತು ಚುನಾವಣಾ ಇಲಾಖೆ ಪಾರದರ್ಶಕವಾಗಿ ಪರಿಶೀಲನೆ ನಡೆಸಿ, ಸತ್ಯಾಸತ್ಯತೆಯನ್ನು ಬಹಿರಂಗಪಡಿಸಬೇಕುʼ ಎಂದು ಮುಖಂಡರು ಆಗ್ರಹಿಸಿದರು.
ʼತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಲ್ಲಿ ಅಧಿಕಾರಿಗಳು ವಿಫಲರಾದರೆ ಸಂತ್ರಸ್ತರೊಂದಿಗೆ ಸೇರಿ ಕಂದಾಯ ಕಚೇರಿ ಮುಂಬಾಗ ಪ್ರತಿಭಟನೆ ನಡೆಸಲಾಗುವುದುʼ ಎಂದು ಅವರು ಎಚ್ಚರಿಕೆ ನೀಡಿದರು.