ಮಡಿಕೇರಿ: ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ
ಮಡಿಕೇರಿ ಜೂ.23: ಮಡಿಕೇರಿಯಲ್ಲಿರುವ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆಯ ಇ-ಮೇಲ್ ಸಂದೇಶ ಬಂದ ಹಿನ್ನೆಲೆಯಲ್ಲಿ ತೀವ್ರ ತಪಾಸಣೆ ನಡೆಸಲಾಯಿತು.
ಇ-ಮೇಲ್ ಗಮನಿಸಿದ ನ್ಯಾಯಾಲಯದ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದರು. ಕೊಡಗು ಜಿಲ್ಲಾ ಪೊಲೀಸರು, ಬಾಂಬ್ ನಿಗ್ರಹದಳ ಮತ್ತು ಶ್ವಾನದಳ ನ್ಯಾಯಾಲಯದ ಕಟ್ಟಡಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲು ಸಿಬ್ಬಂದಿಗೆ ಮಾರ್ಗದರ್ಶನ ನೀಡಿದರು.
ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಸುರಕ್ಷತೆಯ ದೃಷ್ಟಿಯಿಂದ ನ್ಯಾಯಾಲಯಕ್ಕೆ ನ್ಯಾಯಾಧೀಶರು, ವಕೀಲರು, ಸಿಬ್ಬಂದಿ ಹಾಗೂ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಜಿಲ್ಲಾ ನ್ಯಾಯಾಧೀಶರು ಇಂದು ಬೆಳಗ್ಗೆ ನ್ಯಾಯಾಲಯಕ್ಕೆ ಇ-ಮೇಲ್ ಸಂದೇಶದ ಮೂಲಕ ಬಾಂಬ್ ಬೆದರಿಕೆ ಬಂದಿದೆ. ಬಾಂಬ್ ನಿಗ್ರಹದಳ ಮತ್ತು ಶ್ವಾನದಳ ಸಂಪೂರ್ಣ ನ್ಯಾಯಾಲಯವನ್ನು ತಪಾಸಣೆ ನಡೆಸಿದೆ. ಯಾವುದೇ ಸಂಶಯಾಸ್ಪದ ವಸ್ತು ಅಥವಾ ಬಾಂಬ್ ಪತ್ತೆಯಾಗಿಲ್ಲ, ಇದೊಂದು ಹುಸಿ ಬಾಂಬ್ ಬೆದರಿಕೆ ಎನ್ನುವುದು ಖಾತ್ರಿಯಾಗಿದ್ದರೂ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದರು.