ಕೋಲಾರ : ಸೆ.27 ರಂದು ಅಂಬೇಡ್ಕರ್ ಸೇವಾ ಸಮಿತಿಯ 9ನೇ ವಾರ್ಷಿಕೋತ್ಸವ
ಹೆಲಿಕಾಪ್ಟರ್ ನಲ್ಲಿ ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ
ಸಾಂದರ್ಭಿಕ ಚಿತ್ರ
ಕೋಲಾರ : ಸೆ. 27ರಂದು ಅಂಬೇಡ್ಕರ್ ಸೇವಾ ಸಮಿತಿ -ಕರ್ನಾಟಕ ಸಂಘಟನೆಯ 9ನೇ ವಾರ್ಷಿಕೋತ್ಸವ ಸಮಾವೇಶ ಕೋಲಾರ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯಲಿದೆ ಎಂದು ಎ.ಎಸ್.ಎಸ್.ಕೆ ಸಂಸ್ಥಾಪಕ ಅಧ್ಯಕ್ಷ ಕೆ.ಎಂ.ಸಂದೇಶ್ ತಿಳಿಸಿದ್ದಾರೆ.
ಈ ಕುರಿತು ನಗರದ ಹೊರವಲಯದಲ್ಲಿರುವ ಖಾಸಗಿ ಕಟ್ಟಡದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕಳೆದ ಒಂಭತ್ತು ವರ್ಷಗಳ ಸುದೀರ್ಘ ಹೋರಾಟದ ನಡಿಗೆಯಲ್ಲಿ ಅಂಬೇಡ್ಕರ್ ಸೇವಾ ಸಮಿತಿ ಸಾವಿರಾರು ಜನಪರ ಹೋರಾಟಗಳನ್ನು ಹಮ್ಮಿಕೊಂಡು ಶೇ. 70ಕ್ಕೂ ಹೆಚ್ಚು ಹೋರಾಟಗಳು ಫಲಪ್ರದವಾಗಿದೆ. ಸಾವಿರಾರು ಶೋಷಿತ ಕುಟುಂಬಗಳಿಗೆ ಧ್ವನಿಯಾಗಿ ಸಂಘಟನೆ ಕೆಲಸ ಮಾಡಿದೆ ಎಂದರು.
ಭೂಮಿ ಹೋರಾಟಗಳಲ್ಲಿ ಸುಮಾರು ಐದು ಸಾವಿರಕ್ಕೂ ಹೆಚ್ಚು ಭೂಮಿಯನ್ನು ಅನ್ಯಾಯಕ್ಕೆ ಒಳಪಟ್ಟವರ ಪರವಾಗಿ ಬಿಡಿಸಿ ಉಳಿಸಿಕೊಡಲಾಗಿದೆ. ದೌರ್ಜನ್ಯಕ್ಕೆ ಒಳಗಾದ ಹೆಣ್ಣುಮಕ್ಕಳ ರಕ್ಷಣೆಗೆ ಪ್ರಾಮಾಣಿಕ ಪ್ರಯತ್ನ ಮಾಡುವಲ್ಲಿ ಸಂಘಟನೆ ಶ್ರಮಿಸಿದೆ ಎಂದು ಹೇಳಿದರು.
ಕ್ರಮಿಸಿದ ಕಾಲ ಕಡಿಮೆಯಾಗಿದ್ದರೂ ಅನುಭವಿಸಿದ ನೋವು, ಅವಮಾನ, ಯಾತನೆಗಳು ದೊಡ್ಡ ಕಲಿಕೆಯನ್ನೇ ಕಲಿಸಿದೆ. ಈ ಎಲ್ಲ ಬೇಕು ಬೇಡಗಳ ನಡುವೆ ಅಂಬೇಡ್ಕರ್ ಸೇವಾ ಸಮಿತಿ 9ನೇ ವಾರ್ಷಿಕೋತ್ಸವ ಸಮಾವೇಶ ಆಚರಿಸಿಕೊಳ್ಳುತ್ತಿದೆ. ಅಂದು ಬಂಗಾರಪೇಟೆ ವೃತ್ತದ ಬಳಿ ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಎಲ್ಲರೂ ಜಮಾವಣೆಗೊಂಡು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬೃಹತ್ ಮೆರವಣಿಗೆ ಮೂಲಕ ವಾಲ್ಮೀಕಿ ವೃತ್ತದಲ್ಲಿರುವ ಮಹರ್ಷಿ ವಾಲ್ಮೀಕಿ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ನಂತರ ಜೂನಿಯರ್ ಕಾಲೇಜು ಮೈದಾನದಲ್ಲಿ ಸಮಾವೇಶ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಸುಮಾರು 5 ಸಾವಿರ ಜನ ಸೇರುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಹೆಲಿಕಾಪ್ಟರ್ ಮೂಲಕ ಪುಷ್ಪಾರ್ಚನೆ:
ಜೂನಿಯರ್ ಕಾಲೇಜು ಮೈದಾನದಲ್ಲಿ ವೇದಿಕೆ ಬಳಿ ಇಡುವ ಅಂಬೇಡ್ಕರ್ ಪ್ರತಿಮೆಗೆ ಹೆಲಿಕಾಪ್ಟರ್ ಮೂಲಕ ಪುಷ್ಪಾರ್ಚನೆಗೈಯಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಸಂಘಟನಾ ಕಾರ್ಯದರ್ಶಿ ಚಿನ್ನಾಪುರ ಅನಿಲ್ ಮತ್ತು ರಾಜ್ಯ ಯುವ ಘಟಕದ ಅಧ್ಯಕ್ಷ ಭಟ್ರಹಳ್ಳಿ ನವೀನ್ ಇದ್ದರು.