Kolar | ಬಿಜಿಎಂಎಲ್ ಮನೆಗಳ ತೆರವು ಕಾರ್ಯಾಚರಣೆ ಆರಂಭ: ಆಶ್ರಯ ಕಳೆದುಕೊಂಡು ಕಣ್ಣೀರಿಟ್ಟ ಗಣಿ ಕಾರ್ಮಿಕರ ಕುಟುಂಬಗಳು; ಸ್ಥಳದಲ್ಲೇ ಪ್ರತಿಭಟನೆ
ಕೋಲಾರ : ಇಂದು ಬೆಳಿಗ್ಗೆ ಕೆ.ಜಿ.ಎಫ್‌ನ ಎಲ್.ಸಿ.ಸಂಖ್ಯೆ 7ರ ಬಳಿ ತೀವ್ರ ಉದ್ವಿಗ್ನ ವಾತಾವರಣ ನೆಲೆಸಿತ್ತು. ದಶಕಗಳಿಂದ ನೆಲೆಸಿದ್ದ ಕೋಲಾರ ಚಿನ್ನದ ಗಣಿ (BGML) ಸಂಸ್ಥೆಯ ಮಾಜಿ ಕಾರ್ಮಿಕರ ಮನೆಗಳನ್ನು ತಾಲೂಕು ಆಡಳಿತವು ತೆರವುಗೊಳಿಸಲು ಮುಂದಾಗಿದ್ದು, ಸ್ಥಳೀಯ ನಿವಾಸಿಗಳು ಮತ್ತು ಸಂತ್ರಸ್ತ ಕುಟುಂಬಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಎಲ್.ಸಿ.ಸಂಖ್ಯೆ 7ರ ಉರಿಗಾಂ ರೈಲ್ವೆ ಮೇಲ್ಸೇತುವೆ (ROB) ನಿರ್ಮಾಣ ಯೋಜನೆಗಾಗಿ ಇಂದು ಕಾರ್ಯಾಚರಣೆಗೆ ಇಳಿದ ಅಧಿಕಾರಿಗಳು, ಸುಮಾರು 20 ಬಿಜಿಎಂಎಲ್ ಕುಟುಂಬಗಳ ಮನೆಗಳ ಜಾಗ ತೆರವುಗೊಳಿಸಲು ಮುಂದಾದರು. ಇದರಿಂದ ಆತಂಕಕ್ಕೆ ಒಳಗಾದ ನಿವಾಸಿಗಳು, ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡರು. ಅನಧಿಕೃತ ವಸತಿ ಕಟ್ಟಡಗಳಾಗಿದ್ದು ತೆರವುಗೊಳಿಸುವುದು ಅನಿವಾರ್ಯ ಎಂದು ಅಧಿಕಾರಿಗಳು ಹೇಳಿ ಪೊಲೀಸರ ಸರ್ಪಗಾವಲಿನಲ್ಲಿ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ.
ಸಂತ್ರಸ್ತರ ಕಣ್ಣೀರು:
ಒಂದು ವಾರದ ಹಿಂದೆಯಷ್ಟೇ ತೆರವು ನೋಟಿಸ್ ನೀಡಲಾಗಿತ್ತು . ಪ್ರತಿಯೊಬ್ಬ ನಿವಾಸಿಯ ಹಿನ್ನೆಲೆ ಅಥವಾ ದಾಖಲೆಗಳನ್ನು ಪರಿಶೀಲಿಸದೆ, ಕಾನೂನಾತ್ಮಕವಾಗಿ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡದೆ ಏಕಾಏಕಿ ತೆರವು ಕಾರ್ಯಾಚರಣೆಗೆ ಧುಮುಕಿದೆ ಎಂದು ಸಂತ್ರಸ್ತ ಕುಟುಂಬಗಳ ಸದಸ್ಯರು ಕಣ್ಣೀರಿಟ್ಟರು.
"ನಾವು ಮೂಲಸೌಕರ್ಯ ಹಾಗೂ ಮೇಲ್ಸೇತುವೆ ಅಭಿವೃದ್ಧಿಗೆ ವಿರೋಧಿಗಳಲ್ಲ. ಆದರೆ ಸಾವಿರಾರು ಅಡಿ ಆಳಕ್ಕೆ ಇಳಿದು ದೇಶಕ್ಕೆ ಚಿನ್ನ ತೆಗೆದುಕೊಟ್ಟ ಕಾರ್ಮಿಕರ ಕುಟುಂಬಗಳನ್ನು ಯಾವುದೇ ಮುನ್ಸೂಚನೆ ಇಲ್ಲದೆ ರಸ್ತೆಗೆ ದೂಡುವುದು ಎಷ್ಟರ ಮಟ್ಟಿಗೆ ಸರಿ?" ಎಂದು ಬಾಧಿತ ಕುಟುಂಬಗಳು ಅಳಲು ತೋಡಿಕೊಂಡವು.
ತಾಲೂಕು ಹಾಗೂ ಜಿಲ್ಲಾಡಳಿತವು ತಕ್ಷಣವೇ ತೆರವು ಕಾರ್ಯಾಚರಣೆ ತಡೆಹಿಡಿದು, ಮಧ್ಯಪ್ರವೇಶಿಸಬೇಕು. ಬಾಧಿತ 20 ಕುಟುಂಬಗಳಿಗೆ ಪರ್ಯಾಯ ವಸತಿ ಹಾಗೂ ಸೂಕ್ತ ಆಸರೆ ಕಲ್ಪಿಸಿದ ನಂತರವೇ ಮೇಲ್ಸೇತುವೆ ಕಾಮಗಾರಿ ಮುಂದುವರಿಸಬೇಕು ಎಂದು ಕೆ.ಜಿ.ಎಫ್ ನಾಗರಿಕರು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.
"ರೈಲ್ವೆ ಕಾಮಗಾರಿ ಸುಗಮವಾಗಿ ಸಾಗಲು ಈ 20 ಮನೆಗಳ ತೆರವು ಅನಿವಾರ್ಯವಾಗಿದೆ. ಇದರಲ್ಲಿ 4 ಮನೆಗಳು ಮಾತ್ರ ಬಿಜಿಎಂಎಲ್‌ನ ಅಧಿಕೃತ ಮನೆಗಳಾಗಿದ್ದು, ಅವರಿಗೆ ನಗರಸಭೆಯಿಂದ ಪುನರ್ವಸತಿ ಕಲ್ಪಿಸಲಾಗುವುದು. ಉಳಿದ 16 ಮನೆಗಳು ಅನಧಿಕೃತವಾಗಿದ್ದು, ಅವುಗಳನ್ನು ತೆರವು ಮಾಡಲೇಬೇಕಾಗುತ್ತದೆ."
ಮಲ್ಲೇಶ್ ಬಾಬು, ಸಂಸದರು, ಕೋಲಾರ.
"ನಾವು ಅಭಿವೃದ್ಧಿಗೆ ವಿರೋಧಿಯಲ್ಲ. ಆದರೆ ಸಂತ್ರಸ್ತರು ಕಾಲು ಹಿಡಿದು ಬೇಡಿಕೊಂಡರೂ ಒಂದು ದಿನದ ಕಾಲಾವಕಾಶ ನೀಡದೆ ಏಕಾಏಕಿ ಮನೆ ಕೆಡವುದು ಅಮಾನವೀಯ. ಕಾರ್ಮಿಕರ ಮಕ್ಕಳನ್ನು ಅನಧಿಕೃತ ಎನ್ನುವುದು ತಪ್ಪು. ಈ ಕೂಡಲೇ ತೆರವು ಕಾರ್ಯಾಚರಣೆ ತಡೆಹಿಡಿಯದಿದ್ದರೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಿ ನ್ಯಾಯಾಂಗ ಹೋರಾಟ ನಡೆಸಲಿದ್ದೇವೆ."
ಜ್ಯೋತಿಬಸು, ಹಿರಿಯ ವಕೀಲರು ಹಾಗೂ ಅಧ್ಯಕ್ಷರು, 'ಸೇವ್ ಕೆ.ಜಿ.ಎಫ್'.