ಬಾಹ್ಯಾಕಾಶ ಕ್ಷೇತ್ರದಲ್ಲಿ ಜಾಗತಿಕ ನಾಯಕನಾಗಲು ಭಾರತ ಸನ್ನದ್ಧ: 'ಲೀಓಸ್' ನಿರ್ದೇಶಕ ಆರ್. ವೆಂಕಟೇಶ್ವರನ್ ಕರೆ
ಕೋಲಾರ: ಯುವಜನರು ವೈಜ್ಞಾನಿಕ ಮನೋಭಾವವನ್ನು ಮೈಗೂಡಿಸಿಕೊಂಡು ಹೊಸ ಆವಿಷ್ಕಾರಗಳ ಮೂಲಕ ಭಾರತವನ್ನು ಬಾಹ್ಯಾಕಾಶ ಕ್ಷೇತ್ರದಲ್ಲಿ ಜಾಗತಿಕ ನಾಯಕನನ್ನಾಗಿ ಮಾಡಲು ಶ್ರಮಿಸಬೇಕು ಎಂದು ಎಲೆಕ್ಟ್ರೋ-ಆಪ್ಟಿಕ್ಸ್ ಸಿಸ್ಟಮ್ಸ್ ಪ್ರಯೋಗಾಲಯದ (LEOS) ನಿರ್ದೇಶಕ ಹಾಗೂ ಹಿರಿಯ ವಿಜ್ಞಾನಿ ಆರ್. ವೆಂಕಟೇಶ್ವರನ್ ಕರೆ ನೀಡಿದ್ದಾರೆ.
ಇಸ್ರೋ ಬಾಹ್ಯಾಕಾಶ ಸಂಸ್ಥೆಯ 'ಲೀಓಸ್' ಹಾಗೂ ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ಜಂಟಿ ಆಶ್ರಯದಲ್ಲಿ ನಗರದ ಟಿ. ಚನ್ನಯ್ಯ ರಂಗಮಂದಿರದಲ್ಲಿ ಬುಧವಾರ ಆಯೋಜಿಸಲಾಗಿದ್ದ 'ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ-2026' ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆಗಸ್ಟ್ 23, 2023 ರಂದು ಚಂದ್ರಯಾನ-3 ನೌಕೆಯು ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿದ ಕ್ಷಣದ ಸ್ಮರಣಾರ್ಥವಾಗಿ ಈ ದಿನವನ್ನು ಆಚರಿಸಲಾಗುತ್ತಿದೆ ಎಂದ ವೆಂಕಟೇಶ್ವರನ್, "ಒಂದು ಕಾಲದಲ್ಲಿ ಸೈಕಲ್ ಮತ್ತು ಎತ್ತಿನ ಬಂಡಿಗಳಲ್ಲಿ ರಾಕೆಟ್ ಉಪಕರಣ ಸಾಗಿಸುತ್ತಿದ್ದ ಭಾರತೀಯ ಬಾಹ್ಯಾಕಾಶ ಕ್ಷೇತ್ರವು ಇಂದು ಇಡೀ ವಿಶ್ವವೇ ತಿರುಗಿ ನೋಡುವಷ್ಟು ಬೆಳೆದಿದೆ. 'ವಿಕಸಿತ ಭಾರತ'ದ ಗುರಿ ತಲುಪಲು ಯುವಜನರಲ್ಲಿ ವೈಜ್ಞಾನಿಕ ಚಿಂತನೆ ಪ್ರಚೋದಿಸುವುದು ಅಗತ್ಯ" ಎಂದು ಅಭಿಪ್ರಾಯಪಟ್ಟ ಅವರು, ಬಾಹ್ಯಾಕಾಶ ನೀತಿ ಸುಧಾರಣೆಗಳಿಂದಾಗಿ ಖಾಸಗಿ ರಂಗದ ಸಹಭಾಗಿತ್ವ ಹೆಚ್ಚಾಗಿದ್ದು, ಬಾಹ್ಯಾಕಾಶ ಸ್ಟಾರ್ಟ್‌ಅಪ್‌ಗಳ ಸಂಖ್ಯೆ 20 ರಿಂದ 400ರ ಗಡಿದಾಟಿದೆ ಎಂದರು.
ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ. ಬಿ.ಕೆ. ರವಿ ಮಾತನಾಡಿ, "ಪ್ರಸ್ತುತ ದಿನಗಳಲ್ಲಿ ವಿಜ್ಞಾನ ಅಧ್ಯಯನ ಮಾಡುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ದೇಶಕ್ಕೆ ಆತಂಕಕಾರಿ ಬೆಳವಣಿಗೆ. ವಿಶ್ವವಿದ್ಯಾನಿಲಯಗಳಲ್ಲಿ ಬಿ.ಎಸ್ಸಿ., ಎಂ.ಎಸ್ಸಿ. ಹಾಗೂ ಪಿಎಚ್.ಡಿ. ಮಟ್ಟದಲ್ಲಿ ವಿಜ್ಞಾನ ಕಲಿಯುವವರ ಸಂಖ್ಯೆ ಹೆಚ್ಚಾಗಬೇಕು. ಬಾಹ್ಯಾಕಾಶ ಕ್ಷೇತ್ರಕ್ಕೂ ಹೆಚ್ಚಿನ ಪ್ರತಿಭಾವಂತರ ಅಗತ್ಯವಿದೆ" ಎಂದು ಕಳವಳ ವ್ಯಕ್ತಪಡಿಸಿದರು.
ಇಸ್ರೋದಲ್ಲಿ ಹಿರಿಯ ವಿಜ್ಞಾನಿಯಾಗಿರುವ ಕೋಲಾರದ ಶೀಲಾ ಅವರ ವಿಶೇಷ ಆಸಕ್ತಿಯಿಂದಾಗಿಯೇ ಈ ಅರಿವು ಕಾರ್ಯಕ್ರಮವನ್ನು ಕೋಲಾರದಲ್ಲಿ ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು. 1976ರ "ಉಪಗ್ರಹ ಆಧಾರಿತ ಶೈಕ್ಷಣಿಕ ದೂರದರ್ಶನ ಪ್ರಯೋಗ"ದ ಸಮಯದಿಂದಲೂ ಬೆಂಗಳೂರು ವಿಶ್ವವಿದ್ಯಾನಿಲಯವು ಇಸ್ರೋದೊಂದಿಗೆ ನಿಕಟ ಸಂಪರ್ಕ ಹೊಂದಿದೆ ಎಂಬುದನ್ನು ಸ್ಮರಿಸಿದರು.
ಮುಖ್ಯ ಅತಿಥಿಯಾಗಿದ್ದ ಬೆಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಉಪಕುಲಪತಿ ಪ್ರೊ. ಕೆ. ಸಿದ್ದಪ್ಪ ಮಾತನಾಡಿ, ದೇಶದ ರಕ್ಷಣಾ ವ್ಯವಸ್ಥೆ, ಕೃಷಿ, ಆರೋಗ್ಯ ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸ್ಯಾಟಲೈಟ್‌ಗಳ ಕೊಡುಗೆ ಅಪಾರವಾಗಿದೆ ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ವಿಶ್ವವಿದ್ಯಾನಿಲಯದ ಪರೀಕ್ಷಾ ವಿಭಾಗದ ಕುಲಸಚಿವೆ ಪ್ರೊ. ಕುಮುದಾ, ಲೀಓಸ್ ಸಹ ನಿರ್ದೇಶಕ ಮುರಳಿದರ ಕೆ.ಆರ್., ಮುಖ್ಯ ಸಂಪನ್ಮೂಲ ವ್ಯಕ್ತಿ ಎಂ.ಎನ್. ಶ್ರೀನಿವಾಸ್ ಅನುರೂಪ, ಲೀಓಸ್ ಸಂಚಾಲಕಿ ಶೈಲಾ ಹಾಗೂ ಸಿಂಡಿಕೇಟ್ ಸದಸ್ಯ ಜೈದೀಪ್ ಎಂ. ಗೋಪಾಲ್ ಗೌಡ ಉಪಸ್ಥಿತರಿದ್ದರು.