ಕೋಲಾರ: ಸಿ.ಎಂ. ಮುನಿಯಪ್ಪ ಆತ್ಮಚರಿತ್ರೆ ‘ಕಾಲಡಿಯ ಕಣ್ಣು’ ಲೋಕಾರ್ಪಣೆ
ಕೋಲಾರ: ದಲಿತ ಚಳವಳಿಯ ಕಥನವಾದ ‘ಕಾಲಡಿಯ ಕಣ್ಣು’ ಕೃತಿಯನ್ನು ಕೃತಿಕಾರ ಹಾಗೂ ಹಿರಿಯ ದಲಿತ ಹೋರಾಟಗಾರ, ಪತ್ರಕರ್ತ ಸಿ.ಎಂ. ಮುನಿಯಪ್ಪ ಅವರು ಶುಕ್ರವಾರ ತಮ್ಮ ಕಚೇರಿಯಲ್ಲಿ ಸರಳವಾಗಿ ಲೋಕಾರ್ಪಣೆ ಮಾಡಿದರು.
ಆತ್ಮಚರಿತ್ರೆಯ ರೂಪದಲ್ಲಿ ಅನುಭವದ ಕಥನವನ್ನು ಬರವಣಿಗೆಯ ಮೂಲಕ ದಾಖಲಿಸಲು ಮುಂದಾದ ಜಿಲ್ಲೆಯ ಹಿರಿಯ ದಲಿತ ಹೋರಾಟಗಾರ ಹಾಗೂ ಪತ್ರಕರ್ತ ಸಿ.ಎಂ. ಮುನಿಯಪ್ಪ ಅವರು, ಅಂತಿಮವಾಗಿ ದಲಿತ ಚಳವಳಿಯ ಕಥನವಾಗಿ ಏಳು ಅಧ್ಯಾಯಗಳಲ್ಲಿ ತಮ್ಮ ಜೀವನ ಮತ್ತು ಚಳವಳಿಯ 140 ಅನುಭವದ ಪ್ರಸಂಗಗಳನ್ನು 748 ಪುಟಗಳ ಕೃತಿಯಾಗಿ ಹೊರತಂದಿದ್ದಾರೆ.
ಕಳೆದ 11 ವರ್ಷಗಳಿಂದ ವೈಯಕ್ತಿಕ ಹಾಗೂ ಸಾಂಸ್ಕೃತಿಕವಾದ ಹಲವಾರು ಸಂಕಟ, ಸವಾಲುಗಳ ನಡುವೆಯೂ ಸತತ ಪರಿಶ್ರಮಪಟ್ಟು ದಲಿತ ಲೋಕದ ಅನುಭವ ಕಥನಗಳನ್ನು ಬರೆದಿರುವ ಅವರು, ಕೋಲಾರ ಜಿಲ್ಲೆ ಮಾತ್ರವಲ್ಲದೆ ಕರ್ನಾಟಕದ ಇತರೆ ಜಿಲ್ಲೆಗಳ ದಲಿತ ಹೋರಾಟಗಳನ್ನು ದಾಖಲೀಕರಿಸಬೇಕೆಂಬ ಹಂಬಲದಲ್ಲಿ ಈ ಬೃಹತ್ ಕೃತಿಯನ್ನು ರೂಪಿಸಿದ್ದಾರೆ.
ದೊಡ್ಡ ಕಾರ್ಯಕ್ರಮದ ಮೂಲಕ ಕೃತಿಯನ್ನು ಲೋಕಾರ್ಪಣೆಗೊಳಿಸುವ ಉದ್ದೇಶ ಇತ್ತಾದರೂ, ತಮ್ಮ ಆರೋಗ್ಯದಲ್ಲಿನ ಏರುಪೇರಿನ ಕಾರಣ ಜುಲೈ 10ರಂದು ಸರಳವಾಗಿ ಲೋಕಾರ್ಪಣೆಗೊಳಿಸಿದರು.
ಸಾಹಿತಿಗಳು, ಚಿಂತಕರು, ದಲಿತ ಸಂಘಟನೆಯ ಒಡನಾಡಿಗಳು ಹಾಗೂ ಮಿತ್ರರ ಕೋರಿಕೆ ಮತ್ತು ನಿರೀಕ್ಷೆಯಂತೆ ‘ಕಾಲಡಿಯ ಕಣ್ಣು’ ಕೃತಿಯನ್ನು ಬಿಡುಗಡೆಗೊಳಿಸಲಾಗಿದ್ದು, ರಾಜ್ಯಾದ್ಯಂತ ಪ್ರಮುಖ ಪುಸ್ತಕ ಮಳಿಗೆಗಳಲ್ಲಿ ಶನಿವಾರ (ಜುಲೈ 11) ದಿಂದ ಮಾರಾಟಕ್ಕೆ ಲಭ್ಯವಾಗಲಿದೆ.
ಹೊಸ ತಲೆಮಾರಿನ ಹೋರಾಟಗಾರರು ಹಾಗೂ ಬರಹಗಾರರು ಈ ಕೃತಿಯ ಮೂಲಕ ನಮ್ಮ ನೆಲದ ಗತಚರಿತ್ರೆ ಹಾಗೂ ಸಾಮಾಜಿಕ ವಾಸ್ತವಗಳನ್ನು ಅರಿತುಕೊಂಡು, ತಮ್ಮ ಅರಿವನ್ನು ಇತರರೊಂದಿಗೆ ಹಂಚಿಕೊಳ್ಳುವ ಮೂಲಕ ಸಮಾಜದಲ್ಲಿ ದ್ವೇಷರಹಿತ ಸಾಮರಸ್ಯ ಹಾಗೂ ಸದ್ವಿವೇಕಗಳು ಸದೃಢವಾಗಿ ಬೆಳೆಯುವಂತಾಗಲಿ ಎಂಬ ಆಶಯವನ್ನು ಈ ಕೃತಿ ಹೊಂದಿದೆ.
‘ಕಾಲಡಿಯ ಕಣ್ಣು’ ಕೃತಿಯನ್ನು ಕನ್ನಡ ನಾಡಿನ ಓದುಗರು ಪ್ರೀತಿಯಿಂದ ಸ್ವೀಕರಿಸಿ, ಮುಕ್ತ ಮನಸ್ಸಿನಿಂದ ಓದಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡು ಜನಪರ ಚಳವಳಿ ಚೇತನಗಳಿಗೆ ಬೆಂಬಲವಾಗಿ ನಿಲ್ಲಬೇಕು ಎಂದು ಕೃತಿಕಾರ ಸಿ.ಎಂ. ಮುನಿಯಪ್ಪ ಕೋರಿದ್ದಾರೆ.