×
Ad

SIR | ಕೋಲಾರ: ಮನೆಮನೆಗೆ ತೆರಳಿ ಗಣತಿ ನಡೆಸಲು ಬಿಎಲ್ಒಗಳಿಗೆ ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಸೂಚನೆ

Update: 2026-07-03 15:46 IST

ಸಾಂದರ್ಭಿಕ ಚಿತ್ರ (PTI)

ಕೋಲಾರ, ಜು.3 : ಜಿಲ್ಲೆಯಲ್ಲಿ ನಡೆಯುತ್ತಿರುವ ಎಸ್ ಐ ಆರ್ ಕಾರ್ಯದ ಸಂಬಂಧ ಮನೆಮನೆಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕುವಂತೆ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಅವರು ಬಿಎಲ್ಒಗಳಿಗೆ (BLO) ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.ಚುನಾವಣಾ ಆಯೋಗದ ಆದೇಶದಂತೆ ಪ್ರತಿ ಮನೆಗೂ ತೆರಳಿ ನಿಗದಿತ ಗಣತಿ ನಮೂನೆಗಳನ್ನು ವಿತರಿಸಿ, ಸಂಬಂಧಪಟ್ಟವರಿಂದ ಸಹಿ ಪಡೆಯುವುದು ಕಡ್ಡಾಯವಾಗಿದೆ.

ಗಣತಿ ಕಾರ್ಯದ ನೆಪದಲ್ಲಿ ಬಿಎಲ್ ಒಗಳು ಮತದಾರರನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ಒಂದು ಕಡೆ ಗುಂಪುಗೂಡಿಸಿ ಗಣತಿ ನಮೂನೆಗಳನ್ನು ಭರ್ತಿ ಮಾಡಿಸುತ್ತಿರುವ ಪ್ರಕರಣಗಳು ಜಿಲ್ಲಾಡಳಿತದ ಗಮನಕ್ಕೆ ಬಂದಿದೆ. ಈ ರೀತಿಯ ಕಾರ್ಯವೈಖರಿಯನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಧಿಕಾರಿ, ಇನ್ನುಮುಂದೆ ಇಂತಹ ಲೋಪಗಳು ಮರುಕಳಿಸದಂತೆ ಎಚ್ಚರಿಕೆ ನೀಡಿದ್ದಾರೆ. ಪ್ರತಿ ಬಿಎಲ್ಒಗಳು ಕಡ್ಡಾಯವಾಗಿ ಮನೆಮನೆಗೆ ಭೇಟಿ ನೀಡಿ, ಗಣತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಸೂಚಿಸಿದ್ದಾರೆ.

ಈ ಪ್ರಕ್ರಿಯೆಯು ಸಮರ್ಪಕವಾಗಿ ನಡೆಯುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಮೇಲ್ವಿಚಾರಕರು (Supervisors) ನಿರಂತರ ನಿಗಾ ವಹಿಸಬೇಕು. ಒಂದು ವೇಳೆ ಕರ್ತವ್ಯ ಲೋಪ ಎಸಗುವುದು ಅಥವಾ ನಿರ್ಲಕ್ಷ್ಯ ವಹಿಸುವುದು ಕಂಡುಬಂದಲ್ಲಿ, ಅಂತಹ ಬಿಎಲ್ಒಗಳ ಹಾಗೂ ಮೇಲ್ವಿಚಾರಕರು ವಿರುದ್ಧ ಕಾನೂನು ರೀತಿಯ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದ್ದಾರೆ.

ಅಲ್ಲದೆ, ಮತದಾರರಿಗೆ ಗಣತಿ ಫಾರ್ಮ್ ತುಂಬುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಯಾವುದೇ ಸಹಾಯ ಅಥವಾ ಮಾಹಿತಿ ಅಗತ್ಯವಿದ್ದಲ್ಲಿ, ಈಗಾಗಲೇ ಆಯಾ ಮತಗಟ್ಟೆಗಳಲ್ಲಿ (Polling Booths) ಸ್ಥಾಪಿಸಲಾಗಿರುವ ಫೆಸಿಲಿಟೇಶನ್ ಸೆಂಟರ್ಗಳಲ್ಲಿರುವ ಅಧಿಕಾರಿಗಳನ್ನು ಭೇಟಿ ಮಾಡಿ ಅಗತ್ಯ ನೆರವು ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News