Kolar | ಕೆರೆಯಲ್ಲಿ ಈಜಲು ಹೋದ ಅಣ್ಣತಮ್ಮಂದಿರಿಬ್ಬರು ಮೃತ್ಯು
Update: 2026-05-09 22:09 IST
ಕೋಲಾರ : ಕೆರೆಯಲ್ಲಿ ಈಜಲು ಹೋದ ಅಣ್ಣತಮ್ಮಂದಿರಿಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಕೋಲಾರದಲ್ಲಿ ನಡೆದಿದೆ.
ಮೃತರನ್ನು ರೋಣೂರು ಹೋಬಳಿ ವ್ಯಾಪ್ತಿಯ ಚಾಂಪಲ್ಲಿ ಗ್ರಾಮದ ನಿವಾಸಿಗಳಾದ ನರೇಂದ್ರ (25) ಹಾಗೂ ಚಂದನ್ (23) ಎಂದು ಗುರುತಿಸಲಾಗಿದೆ.
ಗಾರೆ ಕೆಲಸಕ್ಕೆಂದು ಪಚ್ಚರಮಾಕಲಹಳ್ಳಿಗೆ ತೆರಳಿದ್ದ ಯುವಕರು ಮಧ್ಯಾಹ್ನದ ತೀವ್ರ ಬಿಸಿಲಿನ ನಡುವೆಯೇ ಸಮೀಪದ ಕೆರೆಯಲ್ಲಿ ಈಜಲು ಇಳಿದಿದ್ದರು. ಈ ವೇಳೆ ನೀರಿನ ಆಳವನ್ನು ಸರಿಯಾಗಿ ಅಂದಾಜಿಸಲು ಸಾಧ್ಯವಾಗದೇ ಇಬ್ಬರೂ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಘಟನೆ ರಾಯಲ್ಪಾಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಯಾವುದೇ ಪ್ರಕರಣ ದಾಖಲಾಗದ ಹಿನ್ನೆಲೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿಲ್ಲ. ಹಿರಿಯರ ಸಮ್ಮುಖದಲ್ಲಿ ಸಂಬಂಧಿಕರು ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.