Kolar | ಕಾಂಗ್ರೆಸ್, ಬಿಜೆಪಿಯಿಂದ ಬಡವರ ಉದ್ಧಾರ ಸಾಧ್ಯವಿಲ್ಲ: ಕೃಷ್ಣಮೂರ್ತಿ
ಕೋಲಾರ : ಕೇಂದ್ರದಲ್ಲಿ ಬಿಜೆಪಿ 12 ವರ್ಷಗಳ ಆಡಳಿತ ನಡೆಸಿದ್ದರೂ ಹಾಗೂ ಕಾಂಗ್ರೆಸ್ ದೇಶವನ್ನು ಸುದೀರ್ಘ ಕಾಲ ಆಳಿದ್ದರೂ ಬಡವರ, ನಿರುದ್ಯೋಗಿಗಳ ಮತ್ತು ಬಹುಜನರ ಸಮಸ್ಯೆಗಳು ಪರಿಹಾರವಾಗಿಲ್ಲ ಎಂದು ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ನಗರದ ಹಳೆಯ ಬಸ್ ನಿಲ್ದಾಣದಲ್ಲಿ ದಾದಾ ಸಾಹೇಬ್ ಕಾನ್ಶಿರಾಮ್ ಅವರ ಮಹಾಪರಿನಿಬ್ಬಾಣದ ಅಂಗವಾಗಿ ಆಯೋಜಿಸಲಾಗಿದ್ದ ಬಿಎಸ್‌ಪಿ ಬೆಂಗಳೂರು ವಲಯ ಸ್ವಾಭಿಮಾನ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಾಂಗ್ರೆಸ್ ’ಗರೀಬಿ ಹಠಾವೋ’ ಎಂದು ಹೇಳಿ 50 ವರ್ಷಗಳೇ ಕಳೆದಿವೆ. ಆದರೆ, ಇಂದಿಗೂ ದೇಶದ 80 ಕೋಟಿ ಜನರು ಸರಕಾರಿ ನ್ಯಾಯಬೆಲೆ ಅಂಗಡಿಗಳ ಮುಂದೆ ಕಿಲೋಮೀಟರ್‌ಗಟ್ಟಲೆ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ಇದೆ. ಮತ್ತೊಂದೆಡೆ, ವಾಜಪೇಯಿ ಅವರ ಕಾಲದ ’ಭಾರತ ಪ್ರಕಾಶಿಸುತ್ತಿದೆ’ ಘೋಷಣೆ ಹಾಗೂ ಮೋದಿ ಅವರ ‘ವರ್ಷಕ್ಕೆ 2 ಕೋಟಿ ಉದ್ಯೋಗ’ ಭರವಸೆಗಳು ಕೇವಲ ಮಾತಿಗೆ ಸೀಮಿತವಾಗಿವೆ ಎಂದು ತಿಳಿಸಿದರು.
ದೇಶದಲ್ಲಿ ನಿರುದ್ಯೋಗ ಪ್ರಮಾಣ ಸಾರ್ವಕಾಲಿಕ ಹೆಚ್ಚಳ ಕಂಡಿದ್ದು, ದೇಶವೂ ಪ್ರಕಾಶಿಸಲಿಲ್ಲ, ಉದ್ಯೋಗವೂ ಸಿಗಲಿಲ್ಲ ಎಂದು ಸರಕಾರಗಳ ವೈಫಲ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಬಡವರು ಮತ್ತು ರೈತರಿಗೆ ಒಂದು ಗುಂಟೆ ಜಮೀನು ನೀಡಲು ಹಿಂಜರಿಯುವ ಸರಕಾರಗಳು, ಉದ್ಯಮಿ ಅಂಬಾನಿಗೆ ಎಕರೆಗೆ ಕೇವಲ 1 ರೂಪಾಯಿಯಂತೆ 1,050 ಎಕರೆ ಹಾಗೂ ಟಾಟಾ ಕಂಪೆನಿಗೆ ಎಕರೆಗೆ 1,000 ರೂಪಾಯಿಯಂತೆ 3,000 ಎಕರೆ ಭೂಮಿಯನ್ನು ದಾನ ನೀಡಿವೆ. ಬ್ಯಾಂಕ್ ಆಫ್ ಬರೋಡಾದಂತಹ ಬ್ಯಾಂಕ್‌ಗಳು ಉದ್ಯಮಿಗಳ 35 ಸಾವಿರ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿವೆ. ಆದರೆ, ಬಡವರಿಗೆ 10 ಸಾವಿರ ರೂಪಾಯಿ ಸಾಲ ಕೊಡಲು ಸರಕಾರಿ ವ್ಯವಸ್ಥೆ ಯೋಚಿಸುತ್ತಿದೆ, ಎಂದು ಆಡಳಿತಾರೂಢ ಸರಕಾರಗಳ ಕಾರ್ಪೊರೇಟ್ ಪರ ನೀತಿಯನ್ನು ಟೀಕಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಬಿ.ಸುರೇಶ್ ಕುಮಾರ್, ಕೆ.ಸಿ. ನಾಗರಾಜ್, ಹನುಮಂತರಾಯಪ್ಪ, ನರಸಿಂಹಯ್ಯ, ರುದ್ರಪ್ಪ, ಶೂಲಯ್ಯ, ವಸಂತ್, ಅರುಣ್, ಆಲ್ಬರ್ಟ್, ದಿನೇಶ್, ಶ್ರೀನಿವಾಸ್, ಮಂಜುಳ, ಕೋಲಾರ ಜಿಲ್ಲಾಧ್ಯಕ್ಷ ಶ್ರೀಧರ್, ಬಲರಾಂ, ಶಿವಪ್ಪ, ಚಾರ್ಲೆಸ್, ರಮಣ್ ಕುಮಾರ್, ಜನಾರ್ದನ್ ಮತ್ತು ಶಂಕರ್ ಇದ್ದರು.