ಕೋಲಾರ : ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಯನ್ನು ನಾನು ಸ್ವಾಗತ ಮಾಡುತ್ತೇನೆ. ಒಬ್ಬ ಶಾಸಕರ ಕ್ಷೇತ್ರದಲ್ಲಿ ಸುಮಾರು 1 ಲಕ್ಷದಿಂದ 1.5 ಲಕ್ಷ ಮತದಾರರಿದ್ದರೆ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಹಾಗೂ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸಲು ಅನುಕೂಲವಾಗಲಿದೆ ಎಂದು ಕಾಂಗ್ರೆಸ್ ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೊತ್ತೂರು ಮಂಜುನಾಥ್ ಅಭಿಪ್ರಾಯಪಟ್ಟರು.

ನಗರದಲ್ಲಿ ರವಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕ್ಷೇತ್ರ ಮರುವಿಂಗಡಣೆ ವಿಚಾರದಲ್ಲಿ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ ಎಂಬುದು ಸರಿಯಲ್ಲ. ಪ್ರಕ್ರಿಯೆ ಹೇಗೆ ನಡೆಯಲಿದೆ ಎಂಬುದನ್ನು ನೋಡಬೇಕು. ಜನಸಂಖ್ಯೆ ಮತ್ತು ಕ್ಷೇತ್ರದ ವ್ಯಾಪ್ತಿಗೆ ಅನುಗುಣವಾಗಿ ಶಾಸಕರು ಹಾಗೂ ಸಂಸದರ ಕಾರ್ಯವ್ಯಾಪ್ತಿಯನ್ನು ವ್ಯವಸ್ಥಿತವಾಗಿ ರೂಪಿಸಿದರೆ ಜನಪ್ರತಿನಿಧಿಗಳಿಗೆ ಜನರೊಂದಿಗೆ ಸಂಪರ್ಕ ಸಾಧಿಸಲು ಅನುಕೂಲವಾಗಲಿದೆ ಎಂದರು.

ಇಂಡೋನೇಷ್ಯಾ, ಕಾಂಬೋಡಿಯಾ, ಮಲೇಷ್ಯಾ ಹಾಗೂ ಸಿಂಗಾಪುರದಂತಹ ದೇಶಗಳಲ್ಲಿ ಜನಪ್ರತಿನಿಧಿಗಳ ಕ್ಷೇತ್ರಗಳಲ್ಲಿರುವ ಮತದಾರರ ಸಂಖ್ಯೆ ಕಡಿಮೆ ಇರುವುದನ್ನು ಉದಾಹರಿಸಿದ ಅವರು, ಅಲ್ಲಿ ಸಂಸದರಿಗೆ ಸುಮಾರು 60 ಸಾವಿರ ಮತದಾರರು ಹಾಗೂ ಶಾಸಕರಿಗೆ 8ರಿಂದ 10 ಸಾವಿರ ಮತದಾರರಿರುವ ವ್ಯವಸ್ಥೆಯ ಬಗ್ಗೆ ಉಲ್ಲೇಖಿಸಿದರು. ನಮ್ಮ ದೇಶದಲ್ಲಿ ಜನಸಂಖ್ಯೆ ಹೆಚ್ಚಿರುವುದರಿಂದ ಅದಕ್ಕೆ ಅನುಗುಣವಾಗಿ ಕ್ಷೇತ್ರಗಳನ್ನು ಮರುವಿಂಗಡಿಸುವಾಗ ಪ್ರಾಯೋಗಿಕ ಅಂಶಗಳನ್ನು ಪರಿಗಣಿಸಬೇಕು. ಜನಪ್ರತಿನಿಧಿಗಳು ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸುವಂತ ವ್ಯವಸ್ಥೆ ರೂಪುಗೊಳ್ಳಬೇಕು ಎಂದು ಹೇಳಿದರು.

ಕ್ಷೇತ್ರ ಮರುವಿಂಗಡಣೆಯಿಂದ ಬಿಜೆಪಿಗೆ ಹೆಚ್ಚಿನ ಲಾಭವಾಗಲಿದೆ ಎಂಬ ಪ್ರಶ್ನೆಗೆ, ಇದರಿಂದ ಯಾರಿಗೂ ನಿರ್ದಿಷ್ಟ ಲಾಭವಾಗುವುದಿಲ್ಲ. ಬೇರೆ ರಾಜ್ಯಗಳ ಪ್ರದೇಶಗಳನ್ನು ಕರ್ನಾಟಕಕ್ಕೆ ಸೇರಿಸುವುದಿಲ್ಲ; ರಾಜ್ಯದೊಳಗಿನ ಕ್ಷೇತ್ರಗಳನ್ನೇ ಮರುವಿಂಗಡಣೆ ಮಾಡಲಾಗುತ್ತದೆ. ಶಾಸಕರು, ಸಂಸದರು ತಮ್ಮ ಕ್ಷೇತ್ರದ ಜನರಿಗೆ ಉತ್ತಮವಾಗಿ ಸೇವೆ ಸಲ್ಲಿಸುವಂತಾಗುವ ರೀತಿಯಲ್ಲಿ ಪ್ರಕ್ರಿಯೆ ನಡೆದರೆ ಅದನ್ನು ಸ್ವಾಗತಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

2028ರಲ್ಲಿ ನಡೆಯಬೇಕಿರುವ ವಿಧಾನಸಭಾ ಚುನಾವಣೆ 2029ಕ್ಕೆ ನಡೆಯುವ ಸಾಧ್ಯತೆ ಇದೆ ಎಂಬ ಅಭಿಪ್ರಾಯವನ್ನೂ ಅವರು ವ್ಯಕ್ತಪಡಿಸಿದರು.

ತಮಿಳುನಾಡಿನ ಮಧುರೈನ ತಿರುಪ್ಪರಂಕುಂಡ್ರಂ ಬೆಟ್ಟದ ಮೇಲೆ ಕಾರ್ತಿಕ ದೀಪ ಬೆಳಗಿಸುವ ವಿಚಾರದಲ್ಲಿ ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ಸ್ವಾಗತಿಸಿದ ಅವರು, ಸಿಆರ್‌ಪಿಎಫ್ ಸಿಬ್ಬಂದಿಗೆ ಜವಾಬ್ದಾರಿ ವಹಿಸಿ ದೀಪ ಬೆಳಗಿಸಿರುವುದು ಸಂತಸದ ಸಂಗತಿ ಎಂದರು. ಸಿಬ್ಬಂದಿಗೆ ಸಾರ್ವಜನಿಕರು ಹೂವಿನ ಸ್ವಾಗತ ನೀಡಿ ಸಂಭ್ರಮಿಸಿರುವುದು ಜನರ ಭಾವನೆಗಳನ್ನು ಪ್ರತಿಬಿಂಬಿಸಿದೆ. ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯ ಹಾಗೂ ಆಚರಣೆಗಳಿಗೆ ಗೌರವ ನೀಡಬೇಕು. ಯಾವುದೇ ಸಮುದಾಯ, ಜಾತಿ, ಸಿದ್ಧಾಂತ ಅಥವಾ ಸಂಪ್ರದಾಯವನ್ನು ಕೆದಕುವುದು, ಹಾಳು ಮಾಡಲು ಪ್ರಯತ್ನಿಸುವುದು ಸರಿಯಲ್ಲ. ಧಾರ್ಮಿಕ ಆಚರಣೆಗಾಗಿ ಸುಪ್ರೀಂಕೋರ್ಟ್ ಮೆಟ್ಟಿಲೇರಬೇಕಾದ ಪರಿಸ್ಥಿತಿ ವಿಷಾದನೀಯ. ನ್ಯಾಯಾಲಯದ ಆದೇಶದಿಂದ ಜನರ ಭಾವನೆಗಳಿಗೆ ಗೌರವ ಸಿಕ್ಕಿದ್ದು, ಇದರಿಂದ ಒಳ್ಳೆಯದಾಗಲಿದೆ ಎಂದು ಆಶಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಎಂ ಎಲ್ ಅನಿಲ್ ಕುಮಾರ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸಿ.ವಿ.ನಾಗರಾಜ್, ಕೋಲಾರ

contributor

‌ನಾಗರಾಜ ಸಿ.ವಿ. ಅವರು ಮೂಲತಃ ಮಾನವ ಹಕ್ಕುಗಳು ಹಾಗೂ ಸಾಮಾಜಿಕ ಕಾರ್ಯಕರ್ತರಾಗಿ ಜನಪರ ಚಳವಳಿಗಳಲ್ಲಿ ಮೂರು ದಶಕಗಳಿಂದ ಗುರುತಿಸಿಕೊಂಡಿರುವ ಇವರು, ಆತ್ಮಕತೆಗಳು ಓದುವುದು ಹವ್ಯಾಸವಾಗಿಸಿಕೊಂಡಿದ್ದಾರೆ. ಪ್ರಸ್ತುತ ಕಳೆದ ಇಪ್ಪತ್ತು ವರ್ಷಗಳಿಂದ ವಾರ್ತಾಭಾರತಿ ದಿನ ಪತ್ರಿಕೆಯಲ್ಲಿ ಕೋಲಾರ ಜಿಲ್ಲಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ.