ಮತ ಕಳ್ಳತನದ ಮೂಲಕ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬರಲು ಬಿಜೆಪಿ ಪ್ರಯತ್ನ: ಸಚಿವ ಶಿವರಾಜ್ ತಂಗಡಗಿ ಆರೋಪ
ಕೊಪ್ಪಳ: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ(ಎಸ್‍ಐಆರ್) ಪ್ರಕ್ರಿಯೆಯನ್ನು ಬಳಸಿಕೊಂಡು ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವ ಪ್ರಯತ್ನ ನಡೆದಿದ್ದು, ಬಿಜೆಪಿಗರು ಹಿಂಬಾಗಿಲಿನಿಂದ ಅಧಿಕಾರಕ್ಕೆ ಬರಲು ಪ್ರಯತ್ನಿಸಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್.ಎಸ್.ತಂಗಡಗಿ ವಾಗ್ದಾಳಿ ನಡೆಸಿದ್ದಾರೆ.
ಶುಕ್ರವಾರ ಕೊಪ್ಪಳದಲ್ಲಿ ನಡೆದ ಕೆಪಿಸಿಸಿ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವುದೇ ಮತದಾರರ ಹೆಸರಿನ ಬಗ್ಗೆ ಆಕ್ಷೇಪವಿದ್ದರೆ ನಿಯಮಾನುಸಾರ ಮತದಾರರ ಸ್ವ-ವಿವರ ಒಳಗೊಂಡ ನಮೂನೆ 7ರ ಮೂಲಕ ಮಾಹಿತಿ ನೀಡಬಹುದಾಗಿತ್ತು. ಆದರೆ ಸಾವಿರಾರು ನಮೂನೆ-7ನ್ನು ಸಲ್ಲಿಸಿರುವುದು ಅನುಮಾನಕ್ಕೆ ಕಾರಣವಾಗಿದೆ. ಈ ಪ್ರಕ್ರಿಯೆಯ ಹಿಂದೆ ದಿಲ್ಲಿ ಬಿಜೆಪಿ ಕೇಂದ್ರ ಕಚೇರಿಯ ಕೈವಾಡವಿದೆ. ನಮೂನೆ-7ನ್ನು ಅಲ್ಲಿಂದಲೇ ಭರ್ತಿ ಮಾಡಿ ಕಳುಹಿಸಲಾಗಿದೆ ಎಂದು ಆರೋಪಿಸಿದರು.
ವಿಜಯಪುರದ ಕ್ಷೇತ್ರವೊಂದರಲ್ಲಿ ಸುಮಾರು 13ಸಾವಿರ, ಬಳ್ಳಾರಿಯಲ್ಲಿ 7,061, ಬಬಲೇಶ್ವರದಲ್ಲಿ 1,365, ಭಾಲ್ಕಿಯಲ್ಲಿ 3,200 ಹಾಗೂ ಕೊಪ್ಪಳದ ಯಲಬುರ್ಗಾ ಕ್ಷೇತ್ರದಲ್ಲಿ 540 ಮತಗಳನ್ನು ತೆಗೆದುಹಾಕಲು ಪ್ರಯತ್ನಿಸಲಾಗಿದೆ. ಈ ಬಗ್ಗೆ ಚುನಾವಣಾ ವ್ಯವಸ್ಥೆ ಪಾರದರ್ಶಕವಾಗಿ ಪರಿಶೀಲಿಸಿ, ಸಾರ್ವಜನಿಕರಲ್ಲಿರುವ ಅನುಮಾನಗಳಿಗೆ ಉತ್ತರ ನೀಡಬೇಕು ಎಂದು ಅವರು ಆಗ್ರಹಿಸಿದರು.
ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ವೋಟ್ ಚೋರಿ ಬಗ್ಗೆ ದಾಖಲೆ ಸಮೇತ ಧ್ವನಿ ಎತ್ತಿದ್ದರು. ಆಗ ಬಿಜೆಪಿ ನಾಯಕರು ನೂರು ಚುನಾವಣೆ ಸೋತಿರುವ ನಾಯಕ ಎಂದು ಲೇವಡಿ ಮಾಡಿದ್ದರು. ಆದರೆ ರಾಹುಲ್ ಗಾಂಧಿ, ಪ್ರಜಾಪ್ರಭುತ್ವದ ಉಳಿವಿಗಾಗಿ ನೂರಲ್ಲ, ಇನ್ನೂರು ಚುನಾವಣೆ ಸೋಲುತ್ತೇನೆ ಎಂಬ ನಿಲುವು ವ್ಯಕ್ತಪಡಿಸಿದ್ದಾರೆ ಎಂದು ತಂಗಡಗಿ ಹೇಳಿದರು.
ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಕೊಪ್ಪಳ ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಇನ್ನು ಬಿಜೆಪಿಯವರ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಅವರದ್ದು ಮನೆ ಒಂದು, ಮೂರು ಬಾಗಿಲು ಅಲ್ಲ, ಮನೆ ಒಂದು, ಬಾಗಿಲು ನೂರಾಗಿವೆ. ಯಾರು ಯಾವ ಬಾಗಿಲಿನಿಂದ ಹೊರಗೆ ಬರುತ್ತಾರೆ ಎಂಬುದೇ ಗೊತ್ತಾಗದ ಪರಿಸ್ಥಿತಿ’ ಎಂದು ಅವರು ಲೇವಡಿ ಮಾಡಿದರು.
ಕಾಂಗ್ರೆಸ್ ಸರಕಾರಗಳ ಅವಧಿಯಲ್ಲಿ ಹಸಿರು ಕ್ರಾಂತಿ, ಬ್ಯಾಂಕ್‍ಗಳ ರಾಷ್ಟ್ರೀಕರಣ ಹಾಗೂ ಆಹಾರ ಭದ್ರತೆಯಂತಹ ಮಹತ್ವದ ಕಾರ್ಯಕ್ರಮಗಳು ಜಾರಿಗೆ ಬಂದಿವೆ. ದೇಶದ ಅಭಿವೃದ್ಧಿಗೆ ಕಾಂಗ್ರೆಸ್ ನೀಡಿರುವ ಕೊಡುಗೆಗಳ ಬಗ್ಗೆ ಮಾತನಾಡುವ ಬದಲು ಬಿಜೆಪಿ ನಾಯಕರು ಕೇವಲ ಪ್ರಚಾರದಲ್ಲೇ ಕಾಲ ಕಳೆಯುತ್ತಿದ್ದಾರೆ. ಪ್ರಧಾನಿ ಮೋದಿ ‘ಚಲೋ ಡ್ರೆಸ್ ಹಾಕಿಕೊಂಡು, ಮನ್ ಕೀ ಬಾತ್‍ನಲ್ಲಿ ಎಲ್ಲವನ್ನೂ ಮುಗಿಸುತ್ತಾರೆ. ಮಾಧ್ಯಮದವರ ಪ್ರಶ್ನೆಗಳನ್ನು ಎದುರಿಸುವ ಧೈರ್ಯ ಅವರಿಗಿಲ್ಲ ಎಂದು ಶಿವರಾಜ್ ತಂಗಡಗಿ ಹೇಳಿದರು.