ಕಾಂಗ್ರೆಸ್ ಸರಕಾರ ಅಭಿವೃದ್ಧಿ ಶೂನ್ಯ ಸರಕಾರ : ಛಲವಾದಿ ನಾರಾಯಣಸ್ವಾಮಿ
ಕನಕಗಿರಿ : ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದಲ್ಲಿ ಅಭಿವೃದ್ಧಿ ಸಂಪೂರ್ಣ ಕುಂಠಿತಗೊಂಡಿದೆ. ಇದು ಅಭಿವೃದ್ಧಿ ಶೂನ್ಯ ಸರಕಾರವಾಗಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.
ಕನಕಗಿರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳು ರಾಜ್ಯದಲ್ಲಿ ಸರಿಯಾಗಿ ಜನರಿಗೆ ತಲುಪುತ್ತಿಲ್ಲ. ಜನರಿಗೆ ವಂಚಿಸಿ ಸರಕಾರ ಅಧಿಕಾರ ನಡೆಸುತ್ತಿದೆ ಎಂದು ಕಿಡಿಕಾರಿದರು.
ಗೃಹಲಕ್ಷ್ಮಿ ಹಣ ಸರಿಯಾಗಿ ನೀಡುತ್ತಿಲ್ಲ. ಫಲಾನುಭವಿಗಳಿಗೆ ಗೌರವ ನೀಡುತ್ತಿಲ್ಲ. ಚುನಾವಣೆ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳನ್ನು ಟಕಾಟಕ್ ಎಂದು ನೀಡುತ್ತೇವೆ ಎಂದು ಹೇಳಿದರು. ಈಗ ಯಾವುದೂ ಸರಿಯಾಗಿ ಸಿಗುತ್ತಿಲ್ಲ. ನಾವು ನೀಡುವ ತೆರಿಗೆಯ ಹಣವನ್ನೇ ನಮಗೆ ಕೊಡುತ್ತಿದ್ದಾರೆ. ಜಮೀನು ಹೆಚ್ಚು ಇದ್ದರೆ ನೀಡುವುದಿಲ್ಲ ಎಂದು ಮುಲಾಜಿಲ್ಲದೆ ಹೇಳುತ್ತಾರೆ ಎಂದು ಟೀಕಿಸಿದರು.
ಎಲ್ಲಿ ನೋಡಿದರೂ ರಸ್ತೆಗಳು ಹಾಳಾಗಿವೆ. ಮಳೆ ಕೊರತೆಯಿಂದ ರೈತರು ಕಂಗಾಲಾಗಿದ್ದಾರೆ. ಬೆಳೆಗಳು ಬೆಳೆದಿಲ್ಲ. ದನಕರುಗಳಿಗೆ ಮೇವು, ನೀರು ಸಿಗುತ್ತಿಲ್ಲ. ರೈತರು ಬಹಳ ಕಷ್ಟಕರ ಜೀವನ ಅನುಭವಿಸುತ್ತಿದ್ದಾರೆ ಎಂದರು.
ಎಕರೆಗೆ 25 ಸಾವಿರ ರೂ. ನೀಡಬೇಕು ಎಂದು ಬಿಜೆಪಿ ಹೋರಾಟ ಮಾಡಿದರೆ, ಸರಕಾರ ಕೇವಲ 2 ಸಾವಿರ ರೂ. ನೀಡುತ್ತಿದೆ. ಅದೂ ಕೂಡ ಸರಿಯಾಗಿ ರೈತರಿಗೆ ತಲುಪಿಲ್ಲ. ಕೆಲ ರೈತರಿಗೆ ಎಕರೆಗೆ 700, 900 ರೂ. ಮಾತ್ರ ಬಂದಿದೆ. ಕೇಳಿದರೆ ನನ್ನ ಜೇಬಿನಿಂದ ಕೊಡಲೇನು ಎಂದು ಸರಕಾರ ಹೇಳುತ್ತಿದೆ. ಹಣ ಇಲ್ಲದಿದ್ದರೆ ರಾಜೀನಾಮೆ ಕೊಟ್ಟುಬಿಡಲಿ. ಬೇರೆ ಯಾರಾದರೂ ಬಂದು ನೋಡಿಕೊಳ್ಳುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಸರಕಾರದಲ್ಲಿ ಶೇ.70 ರಷ್ಟು ಭ್ರಷ್ಟಾಚಾರ ನಡೆಯುತ್ತಿದೆ. ಖಾತೆ ಬದಲಾವಣೆ ಮಾಡಬೇಕಾದರೂ ಜಮೀನಿನ ಬೆಲೆ ಕೇಳಿ ಲಂಚ ನಿಗದಿ ಮಾಡುತ್ತಾರೆ. ಎಲ್ಲಾ ದಿನಸಿ ವಸ್ತುಗಳ ಬೆಲೆ ಏರಿದೆ. ಗ್ರಾಹಕರು ಕಂಗಾಲಾಗುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಬದುಕಲು ಆಗುತ್ತಿಲ್ಲ. ದವಸ-ಧಾನ್ಯಗಳ ದರ ಏರಿದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಬಸವರಾಜ ಧಡೇಸೂಗೂರು, ಪ್ರಮುಖರಾದ ನವೀನ್ ಮಾನೆ,ಮಾಹಂತೇಶ ಸಜ್ಜನ, ಸಣ್ಣ ಕನಕಪ್ಪ, ಚೆನ್ನಪ್ಪ ತೆಗ್ಗಿನಮನಿ, ಗ್ಯಾನಪ್ಪ, ಗುರನಗೌಡ, ಮೌನೇಶ, ಲಿಂಗಪ್ಪ ಪೂಜಾರಿ,ಶೇಷಪ್ಪ, ಹನುಮಂತ,ರಂಗಪ್ಪ ಕೊರಗಟಗಿ, ನರಸಪ್ಪ ನಾಯಕ ಸೇರಿದಂತೆ ಇತರರು ಇದ್ದರು.