Gangavathi | ಮೊಬೈಲ್ ಟವರ್ ಏರಿ ಪ್ರೇಯಸಿಯನ್ನು ಕರೆಸುವಂತೆ ಪಟ್ಟು ಹಿಡಿದ ಯುವಕ!
ಗಂಗಾವತಿ: ಪ್ರೇಯಸಿಯನ್ನು ಸ್ಥಳಕ್ಕೆ ಕರೆಸುವಂತೆ ಪಟ್ಟು ಹಿಡಿದು ಯುವಕನೊಬ್ಬ ಮೊಬೈಲ್ ಟವರ್ ಏರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ ಘಟನೆ ನಗರದ ರಾಯಚೂರು ರಸ್ತೆಯ ಚರ್ಚ್ ಹಿಂಭಾಗದಲ್ಲಿ ಸೋಮವಾರ ನಡೆದಿದೆ.
ತಾಲೂಕಿನ ಹಣವಾಳ ಗ್ರಾಮದ ರಾಜಾ ಎಂಬ ಯುವಕ ಟವರ್ ಏರಿದ್ದಾನೆ. ದೇವದುರ್ಗ ಮೂಲದ ಯುವತಿಯೊಬ್ಬಳನ್ನು ಪ್ರೀತಿಸುತ್ತಿರುವ ಆತ, ಆಕೆಯನ್ನು ಸ್ಥಳಕ್ಕೆ ಕರೆಸುವಂತೆ ಪಟ್ಟು ಹಿಡಿದು ಎರಡು ಗಂಟೆಗೂ ಹೆಚ್ಚು ಕಾಲ ಟವರ್‌ನ ತುದಿಯಲ್ಲಿ ನಿಂತಿದ್ದ ಎನ್ನಲಾಗಿದೆ.
ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಹಾಗೂ ಸಾರ್ವಜನಿಕರು ಯುವಕನ ಮನವೊಲಿಸಿ ಕೆಳಗಿಳಿಸಲು ಪ್ರಯತ್ನಿಸಿದರು. ಆದರೆ ಆತ ಟವರ್‌ನಿಂದ ಕೆಳಗಿಳಿಯದೆ ಕೆಲಹೊತ್ತು ನಿಂತು, ಮತ್ತೆ ಕುಳಿತುಕೊಳ್ಳುತ್ತಾ ಆತಂಕ ಮೂಡಿಸಿದ್ದ.
ಈತ ರವಿವಾರ ದೇವದುರ್ಗದಲ್ಲಿಯೂ ಇದೇ ರೀತಿ ಮೊಬೈಲ್ ಟವರ್ ಏರಿ ಆತಂಕ ಸೃಷ್ಟಿಸಿದ್ದ ಎಂದು ತಿಳಿದುಬಂದಿದೆ.
ನಿರಂತರ ಪ್ರಯತ್ನ ಬಳಿಕ ಪೊಲೀಸರು ಯುವಕನನ್ನು ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ.