Kanakagiri | ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಎಬಿಸಿ ಕೇಂದ್ರ ಆರಂಭ
ಕನಕಗಿರಿ : ಪಟ್ಟಣದಲ್ಲಿ ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ ಹಾಗೂ ರೇಬಿಸ್ ಭೀತಿಗೆ ಕಡಿವಾಣ ಹಾಕುವ ಉದ್ದೇಶದಿಂದ ಕನಕಗಿರಿ ಪಟ್ಟಣ ಪಂಚಾಯಿತಿ ಕಲಕೇರಿ ರಸ್ತೆಯಲ್ಲಿ ಎಬಿಸಿ ಕೇಂದ್ರ ಆರಂಭಿಸಿದೆ.
ವಿಶಾಲವಾದ ಪ್ರದೇಶದಲ್ಲಿ ನಿರ್ಮಿಸಿರುವ ಈ ಕೇಂದ್ರದಲ್ಲಿ ಕೆಂಪು ಮಣ್ಣಿನ ಆವರಣ, ಕಬ್ಬಿಣದ ಬೇಲಿ, ಶೆಡ್ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ.
ಈಗಾಗಲೇ 15ಕ್ಕೂ ಹೆಚ್ಚು ಬೀದಿ ನಾಯಿಗಳನ್ನು ಕೇಂದ್ರಕ್ಕೆ ಕರೆತರಲಾಗಿದ್ದು, ಶನಿವಾರದಿಂದ ಅವುಗಳಿಗೆ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆ ನೀಡಲಾಗುವುದು ಎಂದು ನಾಯಿಗಳ ಸಂಗ್ರಹಕ ಅಯ್ಯಪ್ಪ ತಿಳಿಸಿದ್ದಾರೆ.
ಪಟ್ಟಣದಲ್ಲಿ ಬೀದಿ ನಾಯಿಗಳ ಕಾಟದಿಂದ ಮಕ್ಕಳನ್ನು ಶಾಲೆಗೆ ಕಳುಹಿಸಲು ಭಯವಾಗುತ್ತಿತ್ತು. ಈಗ ಪಟ್ಟಣ ಪಂಚಾಯಿತಿ ಕೈಗೊಂಡಿರುವ ಕ್ರಮದಿಂದ ಸಾರ್ವಜನಿಕರಲ್ಲಿ ನೆಮ್ಮದಿ ಮೂಡಿದ್ದು, ಸ್ಥಳೀಯರು ಪಂಚಾಯಿತಿಯ ಕಾರ್ಯವನ್ನು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಲಕ್ಷ್ಮಣ್ ಕಟ್ಟಿಮನಿ, ಸಿಬ್ಬಂದಿ ಯಮನೂರು ಕೋರಿ, ಶರಣು ಪ್ರಮುಖರಾದ ಟಿ.ಜೆ ರಾಮಚಂದ್ರ, ಮಂಜುನಾಥ ನಾಯಕ, ಕನಕಪ್ಪ ಮ್ಯಾಗಡೇ, ತಿಮ್ಮಣ್ಣ ಚಲುವಾದಿ, ಯಮನೂರಪ್ಪ ಇತತರು ಇದ್ದರು.