Kanakagiri | ವಸತಿ ಪ್ರದೇಶದಲ್ಲಿನ ಮದ್ಯದಂಗಡಿ ಸ್ಥಳಾಂತರಕ್ಕೆ ದಲಿತ ಸಂಘರ್ಷ ಸಮಿತಿ ಆಗ್ರಹ
ಕನಕಗಿರಿ: ಪಟ್ಟಣದ 5ನೇ ವಾರ್ಡ್‌ನಲ್ಲಿರುವ ಮದ್ಯದ ಅಂಗಡಿಯಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಆರೋಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ಮಾರ್ಗ–ಆರ್) ಸಂಘಟನೆ, ಅಂಗಡಿಯನ್ನು ತಕ್ಷಣ ಬೇರೆ ಸ್ಥಳಕ್ಕೆ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿ ತಹಶೀಲ್ದಾರ್ ಚಂದ್ರಶೇಖರ ಗಾಳಿ ಅವರಿಗೆ ಗುರುವಾರ ಮನವಿ ಸಲ್ಲಿಸಿತು.
ಸಂಘಟನೆಯ ರಾಜ್ಯ ಸಮಿತಿ ಸದಸ್ಯ ಪಾಮಣ್ಣ ಅರಳಿಗನೂರು ಮಾತನಾಡಿ, ಮದ್ಯದ ಅಂಗಡಿಯ ಹಿಂಭಾಗದಲ್ಲಿ ಮದ್ಯಪಾನಿಗಳು ಮಲ–ಮೂತ್ರ ವಿಸರ್ಜನೆ ಮಾಡುತ್ತಿರುವುದಲ್ಲದೆ, ಜಗಳ ಹಾಗೂ ಇತರೆ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎಂದು ಆರೋಪಿಸಿದರು.
ಅಂಗಡಿಯ ಸಮೀಪ ಕಿರಾಣಿ, ಬೇಕರಿ ಹಾಗೂ ಸ್ಟೇಷನರಿ ಅಂಗಡಿಗಳಿದ್ದು, ಶಾಲೆಗೆ ತೆರಳುವ ಮಕ್ಕಳು ಮತ್ತು ಮಹಿಳೆಯರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ ಸಿ.ಎಲ್.-2 ಉಪದಯ ವೈನ್ಸ್ ಹಾಗೂ ಸಿ.ಎಲ್.-9 ಸಾಯಿ ಬಾರ್ & ರೆಸ್ಟೋರೆಂಟ್ ಮದ್ಯದಂಗಡಿಗಳನ್ನು ತಕ್ಷಣ ಬೇರೆ ಸ್ಥಳಕ್ಕೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದರು.
ಮನವಿ ಸಲ್ಲಿಸುವ ವೇಳೆ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಕಂಠಿರಂಗ ನಾಯಕ, ನಾಗೇಶ ಬಡಿಗೇರ್, ಚಂದುಸಾಬ ಗುರಿಕಾರ, ಕನಕರೆಡ್ಡಿ ಕೆರಿ, ಕೊಟ್ರೇಶ ಮಡಿವಾಳ ಸೇರಿದಂತೆ ಸಂಘಟನೆಯ ಪ್ರಮುಖರು ಉಪಸ್ಥಿತರಿದ್ದರು.