Kanakagiri | ಅರಣ್ಯ ಇಲಾಖೆ ವಿರುದ್ಧ ರೈತರಿಂದ ಪ್ರತಿಭಟನೆ
ಕನಕಗಿರಿ, ಜೂ.13: ಹಲವು ದಶಕಗಳಿಂದ ಸಾಗುವಳಿ ಮಾಡಿಕೊಂಡು ಜೀವನ ನಡೆಸುತ್ತಿರುವ ಭೂಮಿಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಅನಗತ್ಯವಾಗಿ ಹಸ್ತಕ್ಷೇಪ ಮಾಡಿ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ವಿವಿಧ ಗ್ರಾಮಗಳ ರೈತರು ಶುಕ್ರವಾರ ತಹಶೀಲ್ದಾರ್ ಚಂದ್ರಶೇಖರ ಅವರಿಗೆ ಮನವಿ ಸಲ್ಲಿಸಿದರು.
ಕನ್ನೇರಮಡುಗು, ಬೊಮ್ಮಸಾಗರ ತಾಂಡ, ಅಡಿವಭಾವಿ ತಾಂಡ ಹಾಗೂ ಇಂಗಳದಾಳ ಗ್ರಾಮದ ರೈತರು ಮನವಿ ಸಲ್ಲಿಸಿ, ತಾವು ಕಳೆದ ಆರೇಳು ದಶಕಗಳಿಂದ ಕಂದಾಯ ಇಲಾಖೆಗೆ ಸೇರಿದ ಭೂಮಿಯಲ್ಲಿ ಸಾಗುವಳಿ ಮಾಡಿಕೊಂಡು ಜೀವನ ನಡೆಸುತ್ತಿದ್ದು, ಈಗ ಅರಣ್ಯ ಇಲಾಖೆ ಅಧಿಕಾರಿಗಳು ಈ ಭೂಮಿ ಅರಣ್ಯ ಇಲಾಖೆಗೆ ಸೇರಿದೆ ಎಂದು ಹೇಳಿ ಒಕ್ಕಲೆಬ್ಬಿಸಲು ಮುಂದಾಗಿದ್ದಾರೆ ಎಂದು ದೂರಿದರು.
ಸದ್ಯ ಭೂಮಿ ರೈತರ ಸ್ವಾಧೀನದಲ್ಲಿದ್ದು, ಕೃಷಿಯನ್ನೇ ಅವಲಂಬಿಸಿ ನೂರಾರು ಕುಟುಂಬಗಳು ಜೀವನ ಸಾಗಿಸುತ್ತಿವೆ. ಅಲ್ಲದೆ, ಇದೇ ಜಾಗದಲ್ಲಿ ಮನೆಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅಧಿಕಾರಿಗಳ ಕ್ರಮದಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ ಎಂದು ಹೇಳಿದರು.
ಭೂಮಿಯಲ್ಲಿ ನೆಮ್ಮದಿಯಿಂದ ಕೃಷಿ ಮಾಡಲು ಅವಕಾಶ ನೀಡದೆ ಅನಗತ್ಯ ತೊಂದರೆ ನೀಡಲಾಗುತ್ತಿದೆ. ಸಾಗುವಳಿ ಮಾಡುತ್ತಿರುವ ಭೂಮಿಯಿಂದ ತೆರವುಗೊಳಿಸಿದರೆ ನೂರಾರು ಕುಟುಂಬಗಳು ಬೀದಿಪಾಲಾಗುವ ಪರಿಸ್ಥಿತಿ ಎದುರಾಗಲಿದೆ ಎಂದು ರೈತರು ಅಳಲು ತೋಡಿಕೊಂಡರು.
ರೈತರ ಹಿತಾಸಕ್ತಿಯನ್ನು ಕಾಪಾಡುವುದು ಸರ್ಕಾರದ ಆದ್ಯ ಕರ್ತವ್ಯವಾಗಿದ್ದು, ವಿನಾಕಾರಣ ಕಿರುಕುಳ ನೀಡುತ್ತಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು ರೈತರಿಗೆ ರಕ್ಷಣೆ ಒದಗಿಸಬೇಕು ಎಂದು ಅವರು ಆಗ್ರಹಿಸಿದರು.
ವಿವಿಧ ಗ್ರಾಮಸ್ಥರಾದ ಪಾಂಡುರಂಗ ರಾಠೋಡ್, ಪಾಮಣ್ಣ ಅರಳಿಗನೂರು, ರಾಮದುರ್ಗಾ ಸಂಗಪ್ಪ,ಅಮರೇಶ ರಾಠೋಡ್, ಹನುಮೇಶ, ಪರಸಪ್ಪ ಶೇಖರಪ್ಪ, ಶಂಕ್ರಪ್ಪ, ಮಾರುತಿ,ಮಲ್ಲೇಶಗೌಡ,ಹುಸೇನಸಾಬ, ಹನುಮಂತಪ್ಪ ಇದ್ದರು.ವಾಲ್ಮೀಕಿ ವೃತ್ತದಿಂದ ಎಪಿಎಂಸಿ ಮಳಿಗೆ, ಕನಕಾಚಲಪತಿ ದೇಗುಲದ ರಸ್ತೆ ಮೂಲಕ ತಹಶೀಲ್ದಾರ್ ಕಚೇರಿ ವರೆಗೆ ಪ್ರತಿಭಟನೆ ನಡೆಯಿತು.