×
Ad

Koppal | ನಾಬಿರಾಜ ದಸ್ತೆನವರಿಗೆ ‘ಕರ್ನಾಟಕ ಛಾಯಾರತ್ನ’ ಪ್ರಶಸ್ತಿ ಪ್ರದಾನ

Update: 2026-06-13 18:04 IST

ಕೊಪ್ಪಳ: ಕರ್ನಾಟಕ ವಿಡಿಯೋ ಮತ್ತು ಫೋಟೋ ಅಸೋಸಿಯೇಷನ್ ಹಾಗೂ ಕರ್ನಾಟಕ ರಾಜ್ಯ ಪತ್ರಿಕಾ ಛಾಯಾಗ್ರಾಹಕರ ಸಹಕಾರದೊಂದಿಗೆ ತ್ರಿಪುರವಾಸಿನಿ ಅರಮನೆ ಮೈದಾನದಲ್ಲಿ ಆಯೋಜಿಸಲಾದ ಮೂರು ದಿನಗಳ ಅಂತರಾಷ್ಟ್ರೀಯ ಮಟ್ಟದ ಫೋಟೋ ಮತ್ತು ವಿಡಿಯೋ ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ಕೊಪ್ಪಳದ ನಾಬಿರಾಜ ದಸ್ತೆನವರ ಅವರಿಗೆ “ಕರ್ನಾಟಕ ಛಾಯಾರತ್ನ” ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು.

ಕಾರ್ಯಕ್ರಮವನ್ನು ಸಂಘದ ಅಧ್ಯಕ್ಷ ಹೆಚ್.ವಿ. ಕೃಷ್ಣಪ್ಪ ಹಾಗೂ ಕಾರ್ಯದರ್ಶಿ ಎ. ಜಗದೀಶ್ ಉದ್ಘಾಟಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಎಂಎಸ್‌ಎಂಇ ಅಭಿವೃದ್ಧಿ ಅಧಿಕಾರಿ ಕೆ. ದೇವರಾಜ್ ಮಾತನಾಡಿ, ಫೋಟೋ ಮತ್ತು ವಿಡಿಯೋ ಕ್ಷೇತ್ರವು ಇಂದು ಪ್ರಮುಖ ಉದ್ಯಮವಾಗಿ ಬೆಳೆಯುತ್ತಿದ್ದು, ಛಾಯಾಗ್ರಾಹಕರು ಹಾಗೂ ವಿಡಿಯೋಗ್ರಾಫರ್‌ಗಳು ಎಂಎಸ್‌ಎಂಇ ಇಲಾಖೆಯ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ಇದೇ ಮಾದರಿಯ ಪ್ರದರ್ಶನ ಹಾಗೂ ಮಾರಾಟ ಮೇಳಗಳನ್ನು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಆಯೋಜಿಸಲು ಇಲಾಖೆಯ ಸಹಕಾರ ಮುಂದುವರಿಯಲಿದೆ ಎಂದು ತಿಳಿಸಿದರು.

ಅಧ್ಯಕ್ಷ ಹೆಚ್.ವಿ. ಕೃಷ್ಣಪ್ಪ ಮಾತನಾಡಿ, ತಂತ್ರಜ್ಞಾನ ವೇಗವಾಗಿ ಅಭಿವೃದ್ಧಿಯಾಗುತ್ತಿರುವ ಹಿನ್ನೆಲೆಯಲ್ಲಿ ಹೊಸ ತಂತ್ರಜ್ಞಾನವನ್ನು ಛಾಯಾಗ್ರಾಹಕರಿಗೆ ಪರಿಚಯಿಸುವ ಉದ್ದೇಶದಿಂದ ಮೂರು ದಿನಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ರಾಜ್ಯದ ಫೋಟೋ ಹಾಗೂ ವಿಡಿಯೋಗ್ರಫಿ ಕ್ಷೇತ್ರದ ವೃತ್ತಿಪರರು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕಾಗಿ ಸಂಘ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ 2026ನೇ ಸಾಲಿನಲ್ಲಿ ರಾಜ್ಯದ ಮಾಧ್ಯಮ ಕ್ಷೇತ್ರದ ಎಂಟು ಗಣ್ಯರಿಗೆ ಕರ್ನಾಟಕ ರತ್ನ ಮಾದರಿಯಲ್ಲಿ “ಕರ್ನಾಟಕ ಛಾಯಾರತ್ನ” ಪ್ರಶಸ್ತಿ ನೀಡಲಾಗುವುದು ಎಂದು ಅವರು ಘೋಷಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಛಾಯಾಗ್ರಾಹಕರು, ವಿಡಿಯೋಗ್ರಾಫರ್‌ಗಳು ಹಾಗೂ ಕ್ಷೇತ್ರದ ಗಣ್ಯರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಎಂ.ಎಸ್.ಎಂ.ಇ. ಅಭಿವೃದ್ಧಿ ಅಧಿಕಾರಿ ಕೆ. ದೇವರಾಜ್, ಬಿ. ಬೆಂಜಮಿನ್ ಭಾಸ್ಕರ್, ಸೆಲ್ವಮುತ್ತು, ಶ್ರೀನಾಥ್, ಎಸ್.ಕೆ. ಹುಸೇನ್, ಜಾನ್ ಅಮರ್ ರಾಜ್, ರಿನಿ ರಾವಲ್ ಹಾಗೂ ದಿವ್ಯಾ ರವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News