ಕಾರಟಗಿ | ಜಾತಿ ಕಾಲಂ-9ರಲ್ಲಿ 'ವಿಶ್ವಕರ್ಮ' ಎಂದು ನಮೂದಿಸಿ : ವಿಶ್ವಕರ್ಮ ಮಹಾಸಂಘ ಮನವಿ
ಕಾರಟಗಿ: ರಾಜ್ಯ ಸರ್ಕಾರದ ವತಿಯಿಂದ ರಾಜ್ಯಾದ್ಯಂತ ನಡೆಯುತ್ತಿರುವ ಜಾತಿ ಜನಗಣತಿಯಲ್ಲಿ ವಿಶ್ವಕರ್ಮ ಸಮಾಜದವರು ತಪ್ಪದೆ ಪಾಲ್ಗೊಂಡು, ಜಾತಿ ಕಾಲಂ ಸಂಖ್ಯೆ 9ರಲ್ಲಿ ‘ವಿಶ್ವಕರ್ಮ’, ಧರ್ಮದಲ್ಲಿ ‘ಹಿಂದೂ’ ಎಂದು ನಮೂದಿಸಬೇಕು ಎಂದು ಕರ್ನಾಟಕ ಪ್ರದೇಶ ವಿಶ್ವಕರ್ಮ ಮಹಾಸಂಘ (ರಿ) ತಾಲೂಕ ಘಟಕ ಮನವಿ ಮಾಡಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಉಪಾಧ್ಯಕ್ಷ ವೀರೇಶ ಪತ್ತಾರ್ ಅವರು, ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಸೆ.22ರಿಂದ ಪ್ರಾರಂಭವಾದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ಉದ್ಯೋಗ ಸಮೀಕ್ಷೆಯಲ್ಲಿ ಸಮಾಜದ ಪ್ರತಿಯೊಬ್ಬರೂ ಗಣಿತಿದಾರರಿಗೆ ಸರಿಯಾದ ಮಾಹಿತಿ ನೀಡಬೇಕು. ಸರ್ಕಾರದ ಗೆಜೆಟ್ ನಂ. ಎ-1538 ಪ್ರಕಾರ ಜಾತಿ ‘ವಿಶ್ವಕರ್ಮ’, ಧರ್ಮ ‘ಹಿಂದೂ’ ಎಂದು ನಮೂದಿಸುವುದು ಕಡ್ಡಾಯ ಎಂದರು.
ತಾಲೂಕು ಅಧ್ಯಕ್ಷ ಸೂಗುರೇಶ್ವರ ವಿಶ್ವಕರ್ಮ ಮಾತನಾಡಿ, ವಿಶ್ವಕರ್ಮ ಸಮುದಾಯದ ಪ್ರತಿಯೊಬ್ಬರೂ ಸಮೀಕ್ಷೆಯಲ್ಲಿ ಪಾಲ್ಗೊಂಡು ತಮ್ಮ ಕುಟುಂಬದ ವಿವರಗಳನ್ನು ಸರಿಯಾಗಿ ಒದಗಿಸಬೇಕು. ಸಮುದಾಯದ ನಿಖರವಾದ ಜನಸಂಖ್ಯೆ ಹಾಗೂ ಆರ್ಥಿಕ-ಸಾಮಾಜಿಕ ಮಾಹಿತಿ ಸರ್ಕಾರಕ್ಕೆ ದೊರೆತಾಗ ಮಾತ್ರ ಸಮುದಾಯಕ್ಕೆ ಅನುಗುಣವಾಗಿ ಸೌಲಭ್ಯಗಳು ಲಭಿಸುತ್ತವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘಟನಾ ಕಾರ್ಯದರ್ಶಿ ಕಳಕಪ್ಪ ಬಡಿಗೇರ, ಯುವ ಘಟಕದ ಅಧ್ಯಕ್ಷ ಹನುಮಂತಪ್ಪ ವಡ್ಡರಕಲ್, ತಾಲೂಕು ಪ್ರಧಾನ ಕಾರ್ಯದರ್ಶಿ ಹನುಮೇಶ ಆಚಾರ್, ನಾಗರಾಜ ವಿಶ್ವಕರ್ಮ, ಜಗದೀಶ ಪತ್ತಾರ್, ಮೌನೇಶ ವಿಶ್ವಕರ್ಮ, ಶ್ರೀಶೈಲಪ್ಪ ವಿಶ್ವಕರ್ಮ, ನಾಗೇಶ ಬಡಿಗೇರ ಸೇರಿದಂತೆ ಹಲವರು ಉಪಸ್ಥಿತರಿದ್ದರು.