Koppal | ಬಲ್ಡೋಟಾ ಕಾರ್ಖಾನೆಯ ಗೇಟ್ ಮುರಿದು ಆವರಣಕ್ಕೆ ನುಗ್ಗಿದ ರೈತರು
ಕೊಪ್ಪಳ: ಬಲ್ಡೋಟಾ ಕಾರ್ಖಾನೆ ವಿರುದ್ಧದ ಪ್ರತಿಭಟನೆ ಮಂಗಳವಾರ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಪೊಲೀಸರ ಬಿಗಿ ಬಂದೋಬಸ್ತ್ ಹಾಗೂ ಭದ್ರತೆಯನ್ನು ಲೆಕ್ಕಿಸದೇ ನೂರಾರು ರೈತರು ಕಾರ್ಖಾನೆ ಆವರಣದ ಗೋಡೆ ಹಾಗೂ ಗೇಟ್‌ಗಳನ್ನು ಒಡೆದು ಒಳನುಗ್ಗಿದರು.
ಪ್ರತಿಭಟನೆ ವೇಳೆ ರೈತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ, ತಳ್ಳಾಟ-ನೂಕಾಟ ನಡೆಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್., ಹೆಚ್ಚುವರಿ ಜಿಲ್ಲಾಧಿಕಾರಿ ಹೇಮಂತಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳದಲ್ಲಿದ್ದರೂ ಪ್ರತಿಭಟನಾಕಾರರು ಆವರಣ ಪ್ರವೇಶಿಸಿದರು.
ಒಂದು ತಂಡ ಗೋಡೆ ಒಡೆದು ಒಳನುಗ್ಗಿದರೆ, ಮತ್ತೊಂದು ತಂಡ ಮತ್ತೊಂದು ದಿಕ್ಕಿನಿಂದ ಗೋಡೆ ಧ್ವಂಸಗೊಳಿಸಿ ಕಾರ್ಖಾನೆ ಆವರಣ ಪ್ರವೇಶಿಸಿತು. ಇದೇ ವೇಳೆ ಒಬ್ಬ ಯುವಕ ಬಸಾಪುರ ಕೆರೆಗೆ ಜಿಗಿದಿದ್ದು, ಪೊಲೀಸರು ತಕ್ಷಣ ರಕ್ಷಣೆ ಮಾಡಿ ಸುರಕ್ಷಿತವಾಗಿ ಹೊರತೆಗೆದರು.
ಕಾರ್ಖಾನೆ ಆವರಣದಲ್ಲಿರುವ ಬಸಾಪುರ ಕೆರೆಯನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಿಂದ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಹರಸಾಹಸಪಟ್ಟರು.
ಇದೇ ವೇಳೆ ರೈತರು ರಾಷ್ಟ್ರೀಯ ಹೆದ್ದಾರಿಯನ್ನು ಸಂಪೂರ್ಣ ಬಂದ್ ಮಾಡಿದ್ದರಿಂದ ವಾಹನ ಸಂಚಾರ ಅಸ್ತವ್ಯಸ್ತಗೊಂಡು ಕಿಲೋಮೀಟರ್‌ಗಳಷ್ಟು ಟ್ರಾಫಿಕ್ ಜಾಮ್ ಉಂಟಾಯಿತು. ಸಂಚಾರ ದಟ್ಟಣೆಯಲ್ಲಿ ಅಂಬುಲೆನ್ಸ್ ಕೂಡ ಸಿಲುಕಿ ಪರದಾಡುವಂತಾಯಿತು.
ಘಟನಾ ಸ್ಥಳಕ್ಕೆ ಬಳ್ಳಾರಿ ವಲಯದ ಐಜಿಪಿ ಭೇಟಿ ನೀಡಿ ಪರಿಸ್ಥಿತಿಯ ಮಾಹಿತಿ ಪಡೆದುಕೊಂಡರು.