Kanakagiri | 15 ದಿನಗಳಿಂದ ನಾಡಕಚೇರಿಯಲ್ಲಿ ಆಧಾರ್ ಸೇವೆ ಸ್ಥಗಿತ: ಸಾರ್ವಜನಿಕರ ಪರದಾಟ
ಕನಕಗಿರಿ : ಪಟ್ಟಣದ ಕಲಕೇರಿ ರಸ್ತೆಯಲ್ಲಿರುವ ನಾಡಕಚೇರಿಯಲ್ಲಿ ಕಳೆದ ಸುಮಾರು 15 ದಿನಗಳಿಂದ ಆಧಾರ್ ಸಂಬಂಧಿತ ಸೇವೆಗಳು ಸ್ಥಗಿತಗೊಂಡಿದ್ದು, ಸಾರ್ವಜನಿಕರು ತೀವ್ರ ಪರದಾಡುವಂತಾಗಿದೆ.
ಆಧಾರ್ ತಿದ್ದುಪಡಿ, ಮೊಬೈಲ್ ಸಂಖ್ಯೆ ಜೋಡಣೆ, ಹೊಸ ನೋಂದಣಿ, ಭಾವಚಿತ್ರ ಬದಲಾವಣೆ ಹಾಗೂ ಬೆರಳಚ್ಚು ನವೀಕರಣ ಸೇರಿದಂತೆ ವಿವಿಧ ಸೇವೆಗಳಿಗಾಗಿ ಆಗಮಿಸುತ್ತಿರುವ ಸಾರ್ವಜನಿಕರು ಪ್ರತಿದಿನ ಕಚೇರಿಗೆ ಅಲೆದಾಡುವ ಪರಿಸ್ಥಿತಿ ಎದುರಿಸುತ್ತಿದ್ದಾರೆ.
ಸೇವೆ ಯಾವಾಗ ಪುನರಾರಂಭವಾಗಲಿದೆ ಎಂಬ ಬಗ್ಗೆ ನಾಡಕಚೇರಿ ಸಿಬ್ಬಂದಿಯಿಂದಲೂ ಸ್ಪಷ್ಟ ಮಾಹಿತಿ ದೊರೆಯುತ್ತಿಲ್ಲ. ಇದರಿಂದ ಸಾರ್ವಜನಿಕರಲ್ಲಿ ಗೊಂದಲ ಮತ್ತು ಅಸಮಾಧಾನ ಹೆಚ್ಚಾಗಿದೆ.
ಆಧಾರ್ ಸೇವೆಗಳು ಸ್ಥಗಿತಗೊಂಡಿರುವುದರಿಂದ ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಹಾಗೂ ವಿವಿಧ ಸರ್ಕಾರಿ ಯೋಜನೆಗಳ ಫಲಾನುಭವಿಗಳು ತೊಂದರೆ ಅನುಭವಿಸುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಸೇವೆಯನ್ನು ಶೀಘ್ರ ಪುನರಾರಂಭಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.