ಕುಕನೂರು : ಸೋನಂ ವಾಂಗ್ಚುಕ್ ಉಪವಾಸ ಮುಷ್ಕರ ಬೆಂಬಲಿಸಿ ರಾಷ್ಟ್ರಪತಿಗೆ ಮನವಿ

Update: 2026-07-18 15:55 IST

ಕುಕನೂರು, ಜು.18: ಶಿಕ್ಷಣ ತಜ್ಞ, ಪರಿಸರವಾದಿ ಹಾಗೂ ಸಾಮಾಜಿಕ ಹೋರಾಟಗಾರ ಸೋನಂ ವಾಂಗ್ಚುಕ್ ಅವರು ದಿಲ್ಲಿಯ ಜಂತರ್ ಮಂತರ್ ನಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಉಪವಾಸ ಮುಷ್ಕರ ಬೆಂಬಲ ಸೂಚಿಸಿ, ಸಮಾನಮನಸ್ಕರ ಬಳಗದ ವತಿಯಿಂದ ಶನಿವಾರ ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಸಮಾನ ಮನಸ್ಕರ ಬಳಗದ ಪ್ರಮುಖರಾದ ಭೀಮಾಶಂಕರ ಪಾಣೆಗಾಂವ, ರಾಷ್ಟ್ರೀಯ ಮಟ್ಟದ ಪರೀಕ್ಷೆಗಳಾದ ನೀಟ್ ಸೇರಿದಂತೆ ವಿವಿಧ ಪರೀಕ್ಷೆಗಳಲ್ಲಿ ನಡೆದಿರುವ ಅಕ್ರಮಗಳ ಕುರಿತು ಸಮಗ್ರ ಹಾಗೂ ಪಾರದರ್ಶಕ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಶಿಕ್ಷಣ ಕ್ಷೇತ್ರದಲ್ಲಿನ ಅಕ್ರಮಗಳಿಗೆ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಕಳೆದ 21 ದಿನಗಳಿಂದ ಅನಿರ್ದಿಷ್ಟಾವಧಿ ಉಪವಾಸ ಮುಷ್ಕರ ನಡೆಸುತ್ತಿದ್ದ ಸೋನಂ ವಾಂಗ್ಚುಕ್ ಅವರನ್ನು ಪೊಲೀಸರು ಬಲವಂತವಾಗಿ ಪ್ರತಿಭಟನಾ ಸ್ಥಳದಿಂದ ತೆರವುಗೊಳಿಸಿ ಆಸ್ಪತ್ರೆಗೆ ದಾಖಲಿಸಿರುವುದು ಹಾಗೂ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದವರನ್ನು ಚದುರಿಸಲು ಭಾರೀ ಪ್ರಮಾಣದ ಪೊಲೀಸ್ ಪಡೆ ನಿಯೋಜಿಸಿರುವುದು ಖಂಡನೀಯ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವವರೊಂದಿಗೆ ಸರಕಾರ ಅರ್ಥಪೂರ್ಣ ಸಂವಾದ ನಡೆಸಿ, ಚರ್ಚೆಯ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಪ್ರಜಾಪ್ರಭುತ್ವದ ಮೂಲ ಆಶಯವಾಗಿದೆ. ಆದರೆ, ಪ್ರತಿಭಟನಾಕಾರರನ್ನು ಬಲವಂತವಾಗಿ ತೆರವುಗೊಳಿಸಿರುವ ಕ್ರಮವು ಸರ್ಕಾರದ ಸರ್ವಾಧಿಕಾರಿ ಮನೋಭಾವವನ್ನು ಬಯಲಿಗೆಳೆಯುತ್ತದೆ ಎಂದು ಆರೋಪಿಸಿದರು.

ವಾಂಗ್ಚುಕ್ ಅವರ ಆರೋಗ್ಯ ರಕ್ಷಣೆಗೆ ಅಗತ್ಯ ವೈದ್ಯಕೀಯ ಹಾಗೂ ಮಾನವೀಯ ಕ್ರಮಗಳನ್ನು ಕೈಗೊಳ್ಳಬೇಕು. ಅವರ ನ್ಯಾಯಸಮ್ಮತ ಬೇಡಿಕೆಗಳ ಕುರಿತು ಕೇಂದ್ರ ಸರಕಾರ ತಕ್ಷಣ ಸಂವಾದ ಆರಂಭಿಸಿ ಸೂಕ್ತ ಪರಿಹಾರ ಕಂಡುಕೊಳ್ಳಬೇಕು. ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಪಾರದರ್ಶಕತೆ, ವಿಶ್ವಾಸಾರ್ಹತೆ ಹಾಗೂ ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಅಗತ್ಯ ಸುಧಾರಣೆಗಳನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರು, ಮನವಿ ಪತ್ರವನ್ನು ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ರವಾನಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಮಾನ ಮನಸ್ಕರ ಬಳಗದ ಪ್ರಮುಖರಾದ ರುದ್ರಪ್ಪ ಬಂಡಾರಿ, ಬಸವರಾಜ ಕೊಡ್ಲಿ, ಮಂಜುನಾಥ ಅಂಗಡಿ, ಕನಕರಾಯ ಬಜೇಂತ್ರಿ, ಚಂದ್ರು ಆರ್. ಭಾನಾಪುರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News